30ನೇ ವರ್ಷದವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು, ಮೇಳಗಳ ಬೆರಗು
ಮೂಡುಬಿದಿರೆ: ಮೋಹನ್ ಆಳ್ವ ನೇತೃತ್ವದ ವಿರಾಸತ್ ಸಾಂಸ್ಕೃತಿಕ ವೈಭವಕ್ಕೆ 30ನೇ ವರ್ಷದ ಸಂಭ್ರಮ. ಈ ವರ್ಷದ ವಿರಾಸತ್ ಇಂದಿನಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ. ಈ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕಾಗಿ ವಿದ್ಯಾಗಿರಿ ಸರ್ವಾಲಂಕಾರಗೊಂಡು ಸಜ್ಜಾಗಿದೆ. ಇಂದಿನಿಂದ ಭಾನುವಾರದವರೆಗೆ ಆರು ದಿನಗಳ ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ ವಿದ್ಯಾಗಿರಿಯಲ್ಲಿ ಸಿಗಲಿದೆ.
ಈ ಬಾರಿ ಡಿ.10ರಿಂದ 14ರವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ ಮಿಂದೇಳಲು ಮೀಸಲಿರಿಸಲಾಗಿದೆ.
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸೇರಿದಂತೆ ಸುತ್ತಲ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತವೆ.
ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿಸಿರಿ ಮೇಳಗಳ ಆವರಣವನ್ನು ಸಜ್ಜುಗೊಳಿಸಲಾಗಿದ್ದು, ಈ ಬಾರಿ 650 ಮಳಿಗೆಗಳಿವೆ. ವಿದ್ಯಾಗಿರಿಯ ಆವರಣದ ತುಂಬಾ ಸುಮಾರು 2.5 ಲಕ್ಷಕ್ಕೂ ಅಧಿಕ ಹೂವಿನಗಿಡಗಳು, 500ಕ್ಕೂ ಹೆಚ್ಚು ಕಲಾಕೃತಿಗಳಿದ್ದು, ವಿರಾಸತ್ ರಾಜಮಾರ್ಗದ ಅಂದವನ್ನು ಹೆಚ್ಚಿಸಿವೆ.
ರಥಾರತಿ: ಕಳೆದ ಬಾರಿಯಂತೆ ಈ ಬಾರಿಯೂ ರಥ ಸಂಚಾರ ವಿರಾಸತ್ ವಿಶೇಷವಾಗಿದೆ. ವೇದಘೋಷಗಳು, ಪುಷ್ಪಪಲ್ಲಕ್ಕಿ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥಸಂಚಲನ ಮತ್ತು ರಥಾರತಿ ಜರುಗಲಿದೆ. ಮುಖ್ಯ ವೇದಿಕೆಯ ಮುಂಭಾಗದಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ. ಈ ರಥದಲ್ಲಿ ಲೋಕ ಮಾರ್ಗದರ್ಶಕರಾದ ಮರ್ಯಾದಾ ಪುರುಷೋತ್ತಮ ರಾಮ ಹಾಗೂ ಜೀವನೋಲ್ಲಾಸ ಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ದ್ಯೋತಕವಾದ ಮಹಾಲಕ್ಷ್ಮೀ ಹಾಗೂ ವಿದ್ಯಾಮಾತೆ ಮಹಾಸರಸ್ವತಿ ಇರಲಿದ್ದಾರೆ. ರಥದ ಜೊತೆ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾರೋಪದ ದಿನ ರಥವು ಮತ್ತೆ ಸ್ವಸ್ಥಾನಕ್ಕೆ ರಥ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ.
ಮೆರವಣಿಗೆ: 150ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 4000ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಯ ರಕ್ಷಣೆ ಹಾಗೂ ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ಮೆರವಣಿಗೆಯ ಉದ್ದೇಶ ಎನ್ನುತ್ತಾರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ.
ಕೃಷಿ ಮೇಳ : ವಿರಾಸತ್ನಲ್ಲಿ ಕೃಷಿಯ ಅದ್ಭುತ ಲೋಕವೇ ನಿರ್ಮಾಣವಾಗಿದೆ. ದೇಶ ವಿದೇಶಗಳಿಂದ ತಂದ ತಳಿಗಳು ಹಾಗೂ ಕಸಿ ಮಾಡಿದ ವೈವಿದ್ಯ ಫಲಗಳ ಜೊತೆಗೆ ಇಲ್ಲಿನ ಹಲವು ಬಗೆಯ ಫಲಪುಷ್ಪ ಮತ್ತು ತರಕಾರಿಗಳನ್ನು ಬೆಳೆಯವ ಕೆಲಸವನ್ನು 250ಕ್ಕೂ ಹೆಚ್ಚಿನ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಇಸ್ರೇಲ್ ತಂತಾಜ್ಞಾನ ಬಳಸಿ ಹಾಗಲಕಾಯಿ, ಕುಂಬಳಕಾಯಿ, ಹರಿವೆ, ಬೆಂಡೆಕಾಯಿ, ಬದನೆ, ಪಡುವಲಕಾಯಿ ಹಾಗೂ ಇನ್ನಿತರ ತರಕಾರಿಗಳು ಬೆಳೆಯಲಾಗಿದೆ.
ಆಹಾರ ಮೇಳ: ಆಹಾರ ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಹಿಡಿದು ಫಾಸ್ಟ್ಫುಡ್ ತನಕದ ಸಸ್ಯಾಹಾರ ಹಾಗೂ ಮಾಂಸಾಹಾರ ಇತ್ಯಾದಿಗಳ ವೈವಿಧ್ಯ ಇವೆ. ಆಹಾರದ ಪ್ರದರ್ಶನ ಮತ್ತು ಮಾರಾಟವಿದೆ.
ಫಲಪುಷ್ಪ ಮೇಳ: ನಮ್ಮ ನೆಲದ ಚೆಂಡು, ಮಲ್ಲಿಗೆ ಮತ್ತಿತರ ಹೂಗಳ ಜೊತೆ ಹೂ ಗಿಡಗಳಾದ ಪಾಯಿಂಸೆಟ್ಟಿ, ಪೆಟುನಿಯಾ, ಸಾಲ್ವಿಯಾ, ಆಗ್ಲೋನಿನ, ಫಿಲಿಡೊಡ್ರನ್, ಟೊರ್ನಿಯ, ಕಲೆನಚೋ ವಿವಿಧ ಬಗೆಯ ಸಮಗ್ರ ಫಲ ಪುಷ್ಪ ಪ್ರದರ್ಶನ ಮೇಳೈಸಲಿವೆ.
ಸದಾಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೆಪುಳ, ಸಿಲ್ವರ್ ಡಸ್ಟ್ ಲವೆಂಡಾರ್, ಅನೆಸೊಪ್ಪು, ಅಂತೋರಿಯಮ್, ಮಲ್ಲಿಗೆ, ಸಲ್ವಿಯ ಸ್ಪ್ಲೆಂಡನ್ಸ್, ಸೆಲೋಶಿಯ, ಚೈನೀಸ್ ಫ್ರಿಂಜ್, ವೀಪಿಂಗ್ ಫಿಗ್, ವಿಶ್ಬೋನ್ ಸೇರಿದಂತೆ ನಂದನವನವೇ ಧರೆಗಿಳಿದಂತೆ ಭಾಸವಾಗುತ್ತಿವೆ.
ಇನ್ನು ಪುಷ್ಪಗಳಿಂದ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲು ಇತ್ಯಾದಿ ಕಲಾಕೃತಿಗಳಿವೆ.
ಔಷಧೀಯ ಸಸ್ಯಗಳಾದ ಅಮ್ರ, ನಂದಿ, ಬಕುಲಾ, ಶಲ್ಮಾಲಿ, ಜಂಬೂ, ತಿಲಕ, ತಾರೇಕಾಯಿ, ಸರಳ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಾಕೇಸರ, ಪಾಲಶ ಗಿಡ ಸೇರಿದಂತೆ ನೂರಾರು ಸಸ್ಯ ಸಂಕುಲವಿದೆ.
ಕಲಾಕೃತಿ : ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ಕೈ ಬೀಸಿ ಕರೆಯುತ್ತಿವೆ. ಸಿಮೆಂಟ್ನಿಂದ ತಯಾರಿಸಲಾದ ಒಂಟೆ, ಅಳಿಲು, ಟಗರು, ಯಕ್ಷಗಾನ ಕಲಾಕೃತಿಗಳು ಹಾಗೂ 24 ಜೈನ ತೀರ್ಥಂಕರರು, ವಿವಿಧ ಸಂಪ್ರದಾಯ ಶೈಲಿಯ ಮದುವೆಯ ವೇಷಧಾರಿಗಳ ಆಕೃತಿಗಳು, ಜ್ಞಾನಪೀಠ ಪುರಸ್ಕೃತರ ಪ್ರತಿಮೆ, ವಿವೇಕಾನಂದ, ರಾಧಾಕೃಷ್ಣ, ಗಣಪತಿ, ಬಸವಣ್ಣ, ಮೀರಾಬಾಯಿ, ಕಥಕ್ಕಳಿಯಂತಹ ಅನೇಕ ಆಕರ್ಷಣೀಯ ವೇಷಧಾರಿ ಅಕೃತಿಗಳ ಜೊತೆಗೆ ಮೋಲ್ಡ್ ಮಾಡಿದ ಕಲಾಕೃತಿಗಳು ಕಂಗೊಳಿಸಲಿವೆ.
ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರ್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು, ಪ್ರಾದೇಶಿಕ ಕಲಾಪ್ರಕಾರಗಳ ಕಲಾಕೃತಿಗಳು ಮನ ಸೆಳೆಯುತ್ತವೆ.
ಛಾಯಾಚಿತ್ರ ಮತ್ತು ಲಲಿತಕಲಾ ಮೇಳ: ರಾಷ್ಟ್ರೀಯ- ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರ ಸಾವಿರಕ್ಕೂ ಅಧಿಕ ಛಾಯಾಚಿತ್ರಗಳು, ಈ ಬಾರಿಯ ವಿರಾಸತ್ಗೆ ಆಹ್ವಾನಿಸಿದ 100ಕ್ಕೂ ಅಧಿಕ ಕಲಾಕೃತಿಗಳು ಲಲಿತಕಲಾ ಮೇಳದ ಸೊಬಗನ್ನು ಹೆಚ್ಚಿಸಲಿವೆ. 100 ಕಲಾಕೃತಿಗಳ ಪೈಕಿ ಅತ್ಯುತ್ತಮ ಕಲಾಕೃತಿಗಳಿಗೆ ವಿಶೇಷ ಬಹುಮಾನಗಳಿವೆ.
ಸೀರೆ- ಆಭರಣ: ಮಹಿಳೆಯರ ಕಣ್ಮನ ಸೆಳೆಯುವ ಕೈಮಗ್ಗಗಳ ಸೀರೆಯ ಪ್ರದರ್ಶನವು ಈ ಬಾರಿಯ ವಿಶೇಷ. ಸುಮಾರು 30ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಆಭರಣಗಳ ಮಳಿಗೆಗಳು ಸೌಂದರ್ಯವನ್ನೂ ಹೆಚ್ಚಿಸಲಿವೆ.
ಕಾರ್ಯಕ್ರಮಗಳು
ಡಿ.10: ಉದ್ಘಾಟನೆ- ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಸಂಜೆ 5.30ರಿಂದ 6.30ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಸಂಜೆ 6.35ರಿಂದ ರಾತ್ರಿ 8.30ರ ವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜೊತೆಗೆ ರಥಾರತಿ ನಡೆಯಲಿದೆ.
ಡಿ.11: ಸಂಜೆ 5.45ರಿಂದ 6.30ರವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಬಾರಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. 6.35ರಿಂದ 7.30ರ ವರೆಗೆ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು. ರಾತ್ರಿ 7.45ರಿಂದ 9ರ ವರೆಗೆ ಗುಜರಾತ್ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಡಿ.12: ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 8ರವರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರು ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರು ಸನಾತನ ನಾಟ್ಯಾಲಯ, ಕುಂದಾಪುರ ನೃತ್ಯ ವಸಂತ ನಾಟ್ಯಾಲಯ, ಮಂಗಳೂರು ಗಾನ ನೃತ್ಯ ಅಕಾಡೆಮಿ, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರು ನೃತ್ಯ ವೈವಿಧ್ಯ ನಡೆಸಿಕೊಡುವರು. ರಾತ್ರಿ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.
ಡಿ.13: ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 8 ಗಂಟೆಯವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ 9ರವರೆಗೆ ಕೋಲ್ಕತ್ತಾದ ಆಶೀಮ್ ಬಂಧು ಚಟರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್ ಪರ್ಫಾರ್ಮಿಂಗ್ ಆರ್ಟ್ಸ್ ‘ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಡಿ.14 : ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 9ರ ವರೆಗೆ ಚೆನ್ನೈ ಸ್ಟೆಕೇಟೋದ ಖ್ಯಾತ 25 ಕಲಾವಿದರಿಂದ ಭರ್ಜರಿ ‘ಸಂಗೀತ ರಸದೌತಣ’ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ.
ಡಿ.15: ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತದೆ.
ಆಳ್ವಾಸ್ ವಿರಾಸತ್ಗೆ ಪ್ರವೇಶ ಉಚಿತವಾಗಿದ್ದು, ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳುತ್ತವೆ. 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಗೊಳ್ಳುವ 15 ನಿಮಿಷ ಮೊದಲೇ ಆಸೀನರಾಗಬೇಕು. ವಾಹನ ಪಾರ್ಕಿಂಗ್ಗೆ ವಿಶಾಲ ವ್ಯವಸ್ಥೆ ಇರುತ್ತದೆ. ಕಣ್ಮನ ಸೆಳೆಯುವ ಸೊಬಗನ್ನು ಸವಿಯಬಹುದು ಎಂದು ಸಂಘಟಕರು ಹೇಳಿದ್ದಾರೆ.