ಮಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ನಡೆದ ಘಟನೆ
ಬೆಂಗಳೂರು : ಕಳೆದ ವರ್ಷ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ವೃದ್ಧ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಭಾರಿ ಸುದ್ದಿಯಾಗಿ, ಆ ಪ್ರಯಾಣಿಕನ ಬಂಧನವೂ ಆಗಿತ್ತು. ಇದೀಗ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಇದೇ ಮಾದರಿಯ ಘಟನೆ ನಡೆದಿದೆ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನೊಬ್ಬ ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ನಾನ್ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿ ಸಮೀಪದ ಕಿರೇಸೂರು ಢಾಬಾದಲ್ಲಿ ನಿಂತಾಗ ಯುವತಿ ಸೀಟ್ನ ಬಳಿ ಬಂದ ಸುಮಾರು 32 ವರ್ಷ ವಯಸ್ಸಿನ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಚಲಿತಗೊಂಡ ಯುವತಿ ಕಿರುಚಿದ್ದಾರೆ. ಇದನ್ನು ಕೇಳಿದ ಸಹ ಪ್ರಹಯಾಣಿಕರು, ಬಸ್ ಸಿಬ್ಬಂದಿ ಅತ್ತ ಧಾವಿಸಿ ಯುವಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನನ್ನು ಅಲ್ಲಿಯೇ ಕೆಳಗಳಿಸಿ ಪ್ರಯಾಣ ಮುಂದುವರಿಸಲಾಗಿದೆ. ಯುವತಿ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಪ್ರಯಾಣವನ್ನು ಮುಂದುವರಿಸಿದೆವು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.
ಯುವತಿ ಆಸನ ಸಂಖ್ಯೆ 3ರಲ್ಲಿ ಇದ್ದರು. ಯುವಕ 28-29 ಸಂಖ್ಯೆಯ ಆಸನದಲ್ಲಿದ್ದ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿರುವುದಾಗಿ, ತಾನು ಮೆಕ್ಯಾನಿಕಲ್ ಎಂಜಿನಿಯರ್ ಎಂದು ತಿಳಿಸಿರುವುದಾಗಿಯೂ ಸಹ ಪ್ರಯಾಣಿಕರು ಹೇಳಿದ್ದಾರೆ. ಈ ವಿಚಾರ ಇನ್ನಷ್ಟೇ ದೃಢಪಡಬೇಕಿದೆ. ಯುವಕ ಮದ್ಯಪಾನದ ಅಮಲಿನಲ್ಲಿದ್ದ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ಬ್ಯಾಗ್ ಮತ್ತು ಆಸನವನ್ನು ಶುಚಿಗೊಳಿಸಿದ ಸಿಬ್ಬಂದಿ, ಘಟನೆಯಿಂದಾಗಿ ಆಘಾತಗೊಂಡಿದ್ದ ಯುವತಿಗೆ ಸುರಕ್ಷತೆ ಒದಗಿಸುವ ಭರವಸೆ ನೀಡಿದರು.ಯುವತಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದರಿಂದ ಪ್ರಯಾಣ ಮುಂದುವರಿಸಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 26 ರಂದು ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಮುಂಬೈ ನಿವಾಸಿ ಎಸ್.ಮಿಶ್ರಾ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದ. ಈ ಪ್ರಕರಣ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.