ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ಸತತ 11ನೇ ಬಾರಿಗೆ ರೆಪೊ ದರವನ್ನು ಬದಲಿಸದೆ ಶೇಕಡಾ 6.5ರಷ್ಟು ಯಥಾಸ್ಥಿತಿ ಕಾಯ್ದಿರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯಾದ ಶೇಕಡಾ 7.2ರ ಬದಲು ಶೇಕಡಾ 6.6ಕ್ಕೆ ತಗ್ಗಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು 7 ತ್ರೈಮಾಸಿಕ ಕನಿಷ್ಠ 5.4 ಶೇಕಡಾಕ್ಕೆ ಕುಸಿದಿದ್ದರೂ ಬಡ್ಡಿದರದ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ, ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇಕಡಾ 6.5ದಲ್ಲಿ ಇರಿಸಲು ನಿರ್ಧರಿಸಿದೆ ಮತ್ತು ನೀತಿ ನಿಲುವನ್ನು ತಟಸ್ಥವಾಗಿ ಇರಿಸಲಾಗಿದೆ ಎಂದು ಹೇಳಿದರು.
ಆರ್ಬಿಐ, ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಹಿಂದಿನ ಶೇಕಡಾ 7.2ರಿಂದ ಶೇಕಡಾ 6.6 ಕ್ಕೆ ತೀವ್ರವಾಗಿ ಕಡಿತಗೊಳಿಸಿತು, ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಗುರಿಯನ್ನು ಶೇಕಡಾ 4.5ರಿಂದ ಶೇಕಡಾ 4.8 ಕ್ಕೆ ಹೆಚ್ಚಿಸಿದೆ.
ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ ಆರ್ಬಿಐ ರೆಪೊ ದರವನ್ನು ಹೆಚ್ಚಿಸಿ ಸಾಧ್ಯವಾದಷ್ಟು ಬ್ಯಾಂಕುಗಳು ಆರ್ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದಕ್ಕೆ ಪ್ರತಿಯಾಗಿ ಆರ್ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.