ಉಡುಪಿ: ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಕೊಲೆಗೈದ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದ ಬ್ಯಾಕಸಿನ್ ರೆಸ್ಟೊರೆಂಟ್ನ ಮುಂಭಾಗದ ಅನಂತ ಕಲ್ಯಾಣ ಮಾರ್ಗದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಹೊನ್ನಾವರದ ಕಾಸರಕೋಡಿನ ನಿವಾಸಿ ಶ್ರೀಧರ ನಾಯಕ್ (38)ಎಂದು ಗುರುತಿಸಲಾಗಿದೆ.
ಶ್ರೀಧರ ನಾಯಕ್ ಮಣಿಪಾಲ ಈಶ್ವರ ನಗರದ ಹೊಟೇಲ್ ಒಂದರ ಕುಕ್ ಆಗಿದ್ದರು ಎಂದು ತಿಳಿದುಬಂದಿದೆ. ಬೆಳಿಗ್ಗೆ 6 ಗಂಟೆ ವೇಳೆಗೆ ರಸ್ತೆಯಲ್ಲಿ ವಾಕಿಂಗ್ ಹೋದವರಿಗೆ ರಸ್ತೆ ಬದಿ ಬಿದ್ದಿದ್ದ ಶವ ಕಂಡು ಪೊಲೀಸರಿಗೆ ತಿಳಿಸಿದ್ದಾರೆ. ಮುಂಜಾನೆ ಹೊತ್ತು ಇಲ್ಲಿ ಮೂರು-ನಾಲ್ಕು ಮಂದಿಯ ತಂಡ ಹೊಡೆದಾಟ ನಡೆಸಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀಧರ್ ಅವರ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಶ್ರೀಧರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕುಮಾರ್, ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ಮಂಜುನಾಥ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.