ಈಗ ಉಪ್ಪು ಕೂಡ ಅಪಾಯಕಾರಿ

ಉಪ್ಪಿನಲ್ಲಿ ರಾಸಾಯನಿಕ ಅಂಶ, ಅಯೋಡಿನ್‌ ಕೊರತೆ ಪತ್ತೆ

ಬೆಂಗಳೂರು: ಪ್ರತಿಯೊಬ್ಬರೂ ನಿತ್ಯವೂ ಸೇವಿಸುವ ಉಪ್ಪು ಕೂಡ ಈಗ ಕಲಬೆರೆಕೆ ಆಗುತ್ತಿದೆ ಎಂಬ ಆಘಾತಕಾರಿ ಅಂಶ ಪತ್ತೆಯಾಗಿದೆ. ಈ ವಿಚಾರವನ್ನು ಖುದ್ದು ಆಹಾರ ಮತ್ತು ಸುರಕ್ಷತಾ ಇಲಾಖೆ ಬಹಿರಂಗಪಡಿಸಿದೆ.

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಉಪ್ಪಿನ ಮಾದರಿಗಳನ್ನು ಸಂಗ್ರಹಿಸಲು ಮುಂದಾದ ಆಹಾರ ಮತ್ತು ಸುರಕ್ಷತಾ ಇಲಾಖೆ ಉಪ್ಪಿನಲ್ಲಿ ಅಯೋಡಿನ್ ಕೊರತೆ ಇರುವುದು ಲ್ಯಾಬ್ ಟೆಸ್ಟ್‌ನಲ್ಲಿ ಪತ್ತೆಹಚ್ಚಿದೆ. ಅಷ್ಟೆ ಅಲ್ಲ ಉಪ್ಪಿನಲ್ಲಿ ಸೀಮೆಸುಣ್ಣ, ಸಿಂಥೆಟಿಕ್ ಪೊಟ್ಯಾಶಿಯಂ ಕ್ಲೋರೈಡ್‌ನಂತಹ ರಾಸಾಯನಿಕಗಳ ಅಂಶ ಇರುವುದು ತಿಳಿದು ಬಂದಿದೆ. ಅಯೋಡಿನ್ ಮಾನವ ದೇಹಕ್ಕೆ ಅತ್ಯಂತ ಮುಖ್ಯವಾದ ಖನಿಜವಾಗಿದೆ. ಅದರ ಕೊರತೆ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಅಯೋಡಿನ್ ಪ್ರಮಾಣ ಕಡಿಮೆಯಾದರೆ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದೀಗ ಉಪ್ಪಿನಲ್ಲಿ ಅಯೋಡಿನ್ ಕೊರತೆ, ಇತರ ರಾಸಾಯನಿಗಳು ಇರುವುದು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದೆ.































 
 

ಆಹಾರ ಮತ್ತು ಸುರಕ್ಷತೆ ಇಲಾಖೆಯ ಗುಣಮಟ್ಟ ಸಮರ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧದಿಂದ ತೊಡಗಿ ಪಾನಿಪುರಿ ತನಕ ಬಂದು ನಿಂತಿದೆ. ‘ಈಟ್ ರೈಟ್’ ಎಂಬ ಅಭಿಯಾನ ಆರಂಭಿಸಿರುವ ಆಹಾರ ಮತ್ತು ಸುರಕ್ಷತಾ ಇಲಾಖೆ, ರಾಜ್ಯದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಕಾಟನ್ ಕ್ಯಾಂಡಿಯಲ್ಲಿ ಬಳಸುವ ಕೃತಕ ಬಣ್ಣದಲ್ಲಿ ರೋಡಮೈನ್ ಬಿ ಅಂಶ ಇರುವುದು ಪತ್ತೆಯಾಗಿತ್ತು.

ಇದು ಕ್ಯಾನ್ಸರ್​​​ಕಾರಕ ಎಂದು ತಿಳಿದು, ಬಣ್ಣ ಬಳಕೆಗೆ ಕಡಿವಾಣ ಹಾಕಲಾಯಿತು. ನಂತರ ಗೋಬಿ ಮಂಚೂರಿ, ಕಬಾಬ್​ಗೆ ಕೃತಕ ಬಣ್ಣ ಬಳಸಿದರೆ, 10 ಲಕ್ಷ ರೂ. ದಂಡ ವಿಧಿಸುವ ಆದೇಶವೂ ಹೊರಬಿತ್ತು. ಪಾನಿಪುರಿಗೆ ಬಳಸುವ ಪಾನಿ ಕೂಡ ಸುರಕ್ಷಿತವಲ್ಲ ಎಂಬುದು ಲ್ಯಾಬ್ ಟೆಸ್ಟ್ ವರದಿಯಲ್ಲಿ ತಿಳಿಯಿತು. ಇಲ್ಲಿಗೆ ಸಮರ ನಿಲ್ಲಿಸದ ಆಹಾರ ಮತ್ತು ಸುರಕ್ಷತಾ ಇಲಾಖೆ ಉಪ್ಪಿನ ಪರೀಕ್ಷೆಗೆ ಇಳಿಯಿತು. ಮುಖ್ಯವಾಗಿ ರಾಜಧಾನಿಯ ಹಾಸ್ಟೆಲ್ ಹಾಗೂ ಪಿಜಿಗಳಿಗೆ ಭೇಟಿ ನೀಡಿ ಉಪ್ಪಿನ ಮಾದರಿ ಪಡೆಯಲಾಯಿತು. 2,300 ಮಾದರಿಗಳ ಪರೀಕ್ಷೆಯಿಂದ ಉಪ್ಪು ಕೂಡ ಕಳಪೆ ಎಂಬ ವಿಚಾರ ಬಯಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top