ಬೆಳ್ತಂಗಡಿ, ಡಿ.2: ಸೋಮವಾರ ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದರು ಬಳಿಕ ಮುಳುಗಿ ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್, ಅಗ್ನಿಶಾಮಕದಳದವರು ರಾತ್ರಿ 11ರ ಸುಮಾರಿಗೆ ಮೃತದೇಹ ಮೇಲೆತ್ತಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಸಾದ್ ಅವರು ಆರ್ಎಸ್ಎಸ್ ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಸಂಯೋಜಕರಾಗಿದ್ದರು.
ಡಿ.03 ರಂದು 11 ಗಂಟೆಗೆ ಬೆಳಾಲು ಹಾಲು ಸೊಸೈಟಿ ಹತ್ತಿರದ ಮೈದಾನದಲ್ಲಿ ಪ್ರಸಾದ್ ಪಾರ್ಥಿವ ಶರೀರ ಇರಿಸಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಾದ ಬಳಿಕ ಮಧ್ಯಾಹ್ನ ಪ್ರಸಾದ್ ಪಾರ್ಥಿವ ಶರೀರ ಸ್ಥಳಾಂತರಗೊಳ್ಳಲಿದ್ದು ಬೆಳಾಲು ಕೂಡಿಗೆ ಸ್ವಗೃಹಕ್ಕೆ ತರಲಾಗುವುದು. ಬಳಿಕ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿದೆ.