ಭಿನ್ನಮತೀಯ ಚಟುವಟಿಕೆ ನಡೆಸಿದ್ದಕ್ಕೆ ಶೋಕಾಸ್ ನೋಟಿಸ್
ಬೆಂಗಳೂರು: ಕರ್ನಾಟಕ ಬಿಜೆಪಿ ಬಣ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಹೈಕಮಾಂಡ್ ಜಗಳ ಬಗೆಹರಿಸಲು ಮುಂದಾಗಿದೆ. ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಾಜ್ಯಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುತ್ತಿರುವ ಬಗ್ಗೆ ಪಕ್ಷದ ವಿವಿಧ ವೇದಿಕೆಗಳಲ್ಲಿ ವರದಿಯಾಗಿದೆ. ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯವಿರುವ ಎಲ್ಲ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕವಾಗಿ ನೀವು ಹೇಳಿಕೆಗಳನ್ನು ನೀಡುತ್ತಿರುವುದು ಮತ್ತು ನಿಲುವುಗಳನ್ನು ವ್ಯಕ್ತಪಡಿಸುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ವಿವಿಧ ಪಕ್ಷದ ವೇದಿಕೆಗಳಲ್ಲಿ ವರದಿಯಾಗಿದೆ.
ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆಗ ನೀವು ಸದ್ವರ್ತನೆಯ ಭರವಸೆ ನೀಡಿದ್ದರೂ ಅಶಿಸ್ತಿನ ಕೃತ್ಯಗಳು ನಿಮ್ಮಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಇದು ಪಕ್ಷದ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಯು ಮೃದುವಾದ ದೃಷ್ಟಿಕೋನವನ್ನು ತೆಗೆದುಕೊಂಡಿತ್ತು ಎಂದು ಯತ್ನಾಳ್ಗೆ ಜಾರಿ ಮಾಡಿರುವ ಶೋಕಾಸ್ ನೋಟಿಸ್ನಲ್ಲಿ ಹೇಳಲಾಗಿದೆ.
ನಿಮ್ಮ ವಿರುದ್ಧ ಶಿಸ್ತು ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಿ. ಹತ್ತು ದಿನಗಳ ಒಳಗೆ ಪ್ರತಿಕ್ರಿಯೆ ನೀಡಬೇಕು. ಈ ಸಮಯದೊಳಗೆ ನಿಮ್ಮ ವಿವರಣೆ ಸಲ್ಲಿಸದಿದ್ದಲ್ಲಿ, ಕೇಂದ್ರ ಶಿಸ್ತು ಸಮಿತಿಯು ನಿಮಗೆ ಹೇಳಲು ಏನೂ ಇರುವುದಿಲ್ಲ. ಈ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಶೋಕಾಸ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.