ರಾಮನಗರ: ಜಿಲ್ಲೆಯ ಹಾರೋಹಳ್ಳಿ ಸಮೀಪದ ದಯಾನಂದ ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆಯಾಗಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ರೇಡಿಯಾಲಜಿ ಡಿಪಾರ್ಟ್ಮೆಂಟ್ ಬ್ಲಾಕ್ನ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ. ಆಗ ತಾನೇ ಜನಿಸಿದ ಮಗುವನ್ನು ಟಾಯ್ಲೆಟ್ ಕಮೋಡ್ನಲ್ಲಿ ಹಾಕಿ ಫ್ಲಶ್ ಮಾಡಲಾಗಿದೆ.
ಬಳಿಕ ಶೌಚಾಲಯದಲ್ಲಿ ನೀರು ಹೋಗದೆ ಬ್ಲಾಕ್ ಆದಾಗ ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ. ಮಗುವಾಗಿದ್ದನ್ನು ಮರೆಮಾಚಲು ಯಾರೋ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಆಸ್ಪತ್ರೆ ವೈದ್ಯರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿನ ಡಿಎನ್ಎ ವರದಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.