ಉಡುಪಿ: ರಿಷಬ್ ಶೆಟ್ಟಿಯವರ ಕಾಂತಾರ-1 ಚಿತ್ರತಂಡ ಪ್ರಯಾಣಿಸುತ್ತಿದ್ದ ಮಿನಿಬಸ್ ಕೊಲ್ಲೂರು ಸಮೀಪ ನಿನ್ನೆ ರಾತ್ರಿ ಪಲ್ಟಿಯಾಗಿ ಆರು ಮಂದಿ ಜೂನಿಯರ್ ಕಲಾವಿದರು ಗಾಯಗೊಂಡಿದ್ದಾರೆ.
ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಹಾಲ್ಕಲ್ನ ಆನೆಝರಿ ಎಂಬಲ್ಲಿ ಬಸ್ ಅಪಘಾತಕ್ಕೀಡಾಗಿದೆ. ಸ್ಕೂಟಿ ಅಡ್ಡಬಂದಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್ ಮಗುಚಿ ಬಿದ್ದಿದೆ. ಬಸ್ನಲ್ಲಿ ಸುಮಾರು 20 ಜ್ಯೂನಿಯರ್ ಕಲಾವಿದರು ಇದ್ದರು. ಈ ಪೈಕಿ 6 ಮಂದಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
2025ರ ಅಕ್ಟೋಬರ್ 2ರಂದು ಈ ರಿಲೀಸ್ ಆಗಲಿರುವ ಕಾಂತಾರ-1 ಚಿತ್ರಕ್ಕೆ ಕುಂದಾಪುರ, ಕೊಲ್ಲೂರು ಆಸುಪಾಸಿನಲ್ಲಿ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರಿನಿಂದ ಸಾಕಷ್ಟು ಜೂನಿಯರ್ ಕಲಾವಿದರನ್ನು ಶೂಟಿಂಗ್ಗಾಗಿ ಕರೆಸಲಾಗಿದೆ. ಅಪಘಾತಕ್ಕೀಡಾದ ಬಸ್ನಲ್ಲಿ ನೃತ್ಯ ಕಲಾವಿದರಿದ್ದರು ಎಂದು ತಿಳಿದುಬಂದಿದೆ.
ಜೂನಿಯರ್ ನೃತ್ಯ ಕಲಾವಿದರು ಹಾಡಿನ ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ. ಇನ್ನೂ ನಾಲ್ಕು ದಿನಗಳ ಕಾಲ ಚಿತ್ರೀಕರಣ ಬಾಕಿಯಿದೆ. ಕೆಲದಿನಗಳ ಹಿಂದೆಯಷ್ಟೇ ಜೂನಿಯರ್ ಕಲಾವಿದರು ತಮಗೆ ಸರಿಯಾಗಿ ಸಂಭಾವನೆ ಸಿಕ್ಕಿಲ್ಲ ಎಂದು ಚಿತ್ರದ ನಿರ್ಮಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.