ನಿಖಿಲ್‌ ಸೋಲಿನಿಂದ ಮನನೊಂದು ವಿಷ ಸೇವಿಸಿದ ಅಭಿಮಾನಿ

ರಾಮನಗರ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಕ್ಕೆ ಬೇಸರಗೊಂಡು ಅವರ ಕಟ್ಟಾ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಆತನನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣದ ಕೂಡ್ಲೂರು ಬಳಿಯ ಶ್ರೀರಾಂಪುರ ಗ್ರಾಮದ ಮಂಜುನಾಥ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವ.
‘ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್’ ಎಂದು ಪತ್ರ ಬರೆದಿಟ್ಟು ಆತ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ದ ಕಾರಣ ಪ್ರಾಣ ಉಳಿದಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಹೀನಾಯ ಸೋಲಾಗಿದೆ. ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಮೈತ್ರಿ ನಾಯಕರು ಭಾವಿಸಿದ್ದರೂ ನಿಖಿಲ್ ಸೋಲನುಭವಿಸಿದ್ದಾರೆ. ಇದರೊಂದಿಗೆ ನಿಖಿಲ್ ಸತತ ಮೂರು ಚುನಾವಣೆಗಳಲ್ಲಿ ಸೋಲನುಭವಿಸಿದ್ದಾರೆ. ಇದರಿಂದ ಅವರ ಈ ಅಭಿಮಾನಿ ಮನನೊಂದಿದ್ದ ಎನ್ನಲಾಗಿದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್​ಗೆ 1,12,642 ಮತ ದೊರೆತರೆ, ಎನ್​ಡಿಎ ಅಭ್ಯರ್ಥಿ ನಿಖಿಲ್‌ಗೆ 87,229 ಮತಗಳು ದೊರೆತಿವೆ. ಕೊನೇ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದ್ದು, ಮತ್ತು ಕುಟುಂಬ ರಾಜಕಾರಣ ಆರೋಪಗಳು ನಿಖಿಲ್​ಗೆ ಹಿನ್ನಡೆಯಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top