ವಿಕ್ರಂ ಗೌಡ ಎನ್‌ಕೌಂಟರ್‌ ಕುರಿತು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಒತ್ತಾಯ

ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುಧಾರಿತ ನಕ್ಸಲರು

ಬೆಂಗಳೂರು: ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ ನಕಲಿ ಎಂಬ ದಟ್ಟ ಅನುಮಾನಗಳಿರುವ ಹಿನ್ನೆಲೆಯಲ್ಲಿ ಎನ್‌ಕೌಂಟರ್‌ನ ಸಾಚಾತನ ತಿಳಿಯಲು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕೆಂದು ಸುಧಾರಿತ ನಕ್ಸಲೀಯರು ಒತ್ತಾಯಿಸಿದ್ದಾರೆ. ವಿಕ್ರಂ ಗೌಡ ಅಲಿಯಾಸ್ ವಿಕ್ರಮ್ ಗೌಡ್ಲುವನ್ನು ಸೋಮವಾರ ರಾತ್ರಿ ಹೆಬ್ರಿಯ ಪೀತಬೈಲಿನಲ್ಲಿ ನಕ್ಸಲ್‌ ನಿಗ್ರಹ ಪಡೆಯವರು ಎನ್‌ಕೌಂಟರ್‌ ಮಾಡಿದ್ದಾರೆ. ಈ ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸುಧಾರಿತ ನಕ್ಸಲೀಯರು ಎನ್‌ಕೌಂಟರ್ ನಿಜವೋ ನಕಲಿಯೋ ಎಂದು ತಿಳಿಯಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ನಕ್ಸಲೀಯರಾದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಎಲ್ಲ ಎನ್‌ಕೌಂಟರ್ ಪ್ರಕರಣಗಳಂತೆ ಈ ಪ್ರಕರಣದ ಬಗ್ಗೆಯೂ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ವಿಕ್ರಂ ಗೌಡ ದೊಡ್ಡ ನಕ್ಸಲ್ ನಾಯಕ ಎಂಬ ಹೇಳಿಕೆಯನ್ನು ನಿರಾಕರಿಸಿದ ಅವರು, ವಿಕ್ರಂ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳು ಸುಳ್ಳು. ಎಲ್ಲ ನಕ್ಸಲೀಯರ ವಿರುದ್ಧ ನಕಲಿ ಕೇಸ್ ದಾಖಲಿಸುವುದು ಸಾಮಾನ್ಯವಾಗಿದೆ ಎಂದಿದ್ದಾರೆ.





































 
 

ವಿಕ್ರಂ ಹತ್ಯೆಗೆ ಕಾರಣವೇನು? ವಿಕ್ರಂ ಅಥವಾ ಅವರ ತಂಡದ ಸದಸ್ಯರು ಎಂದಿಗೂ ಪೊಲೀಸರ ಮೇಲೆ ದಾಳಿ ಮಾಡಿಲ್ಲ ಅಥವಾ ಯಾರನ್ನೂ ಕೊಂದಿಲ್ಲ ಅಥವಾ ಯಾರಿಗೂ ಬೆದರಿಕೆ ಹಾಕಿಲ್ಲ. ಅಂತಹ ಹತ್ಯೆಯ ಅಗತ್ಯ ಅಥವಾ ತುರ್ತು ಏನಿತ್ತು? ಬಂದೂಕುಗಳಿವೆ ಎಂಬ ಕಾರಣಕ್ಕೆ ಯಾರನ್ನಾದರೂ ಕೊಲ್ಲಲು ಯಾರು ಪರವಾನಗಿ ನೀಡಿದರು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯೇ ಉತ್ತರಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ವಿಕ್ರಂ ಕುಟುಂಬಕ್ಕೆ 14 ಗುಂಟೆ ಜಮೀನು ಇತ್ತು. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ನಂತರ ವಿಕ್ರಂ ಕರ್ನಾಟಕ ವಿಮೋಚನಾ ರಂಗದ ಭಾಗವಾಗಿ 1998ರಿಂದ 2004ರವರೆಗೆ ಆ ಪ್ರದೇಶದಲ್ಲಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅರಣ್ಯ ಮತ್ತು ಪೊಲೀಸ್ ಇಲಾಖೆ ಅವರು ಮತ್ತು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿತ್ತು. 2003ರಲ್ಲಿ ಹೆಬ್ರಿ ಬಳಿ ಪಾರ್ವತಿ ಮತ್ತು ಹಾಜಿಮಾ ಎಂಬವರನ್ನು ಹತ್ಯೆ ಮಾಡಲಾಗಿತ್ತು. ಇದಾದ ನಂತರ ಪೊಲೀಸರು ವಿಕ್ರಂ ಮತ್ತು ಸ್ನೇಹಿತರಿಗೆ ಜೀವನ ನರಕವಾಗಿಸಿದ್ದರು. ವಿಕ್ರಂರನ್ನು ಠಾಣೆಗೆ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ. ವಿಚಾರಣೆಯ ಹೆಸರಿನಲ್ಲಿ ಥಳಿಸಿ ಅವಮಾನ ಮಾಡಲಾಗಿದೆ. ನೆಮ್ಮದಿಯ ಜೀವನ ನಡೆಸಲು ದಾರಿ ಕಾಣದೆ ಮುಗ್ಧ ಬುಡಕಟ್ಟು ಯುವಕ ವಿಕ್ರಂ ನಕ್ಸಲ್ ಆದ. ಸುಳ್ಳು ಕೇಸುಗಳನ್ನು ಹಾಕುವ ಮೂಲಕ ಸರಕಾರ ಅವರನ್ನು ದೊಡ್ಡ ನಕ್ಸಲ್ ನಾಯಕ ಎಂದು ಬಿಂಬಿಸಿತು ಮತ್ತು ಅಂತಿಮವಾಗಿ ಅವರನ್ನು ಎನ್‌ಕೌಂಟರ್ ಮಾಡಲಾಯಿತು ಎಂದು ಸುಧಾರಿತ ನಕ್ಸಲರು ಆರೋಪಿಸಿದ್ದಾರೆ.

ಆದಿವಾಸಿಗಳು ನಕ್ಸಲಿಸಂ ಕಡೆಗೆ ತಿರುಗಲು ಸರ್ಕಾರದ ನೀತಿಗಳು ಮತ್ತು ಅಧಿಕಾರಿಗಳ ಕಿರುಕುಳ ಕಾರಣ. ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ಮೂಲಕ ಮುಖ್ಯವಾಹಿನಿಗೆ ಮರಳಲು ಸರಕಾರ ನಕ್ಸಲರಿಗೆ ಆಹ್ವಾನ ನೀಡಿರುವುದು ನಿಜ. ಕರೆಗೆ ಓಗೊಟ್ಟು, 2014 ಮತ್ತು 2018ರ ನಡುವೆ ಹಲವರು ಮುಖ್ಯವಾಹಿನಿಗೆ ಬಂದರು. ನಾಗರಿಕ ಸಮಾಜ ಮೊದಲು ಬಂದ ನಮ್ಮನ್ನು ಅಪ್ಪಿಕೊಂಡಿತು. ಆದರೆ ನಮ್ಮ ಹಿಂದೆ ಬಂದವರ ಕಥೆ ಏನು? ಆದಿವಾಸಿ ಯುವತಿ ಕನ್ಯಾಕುಮಾರಿ ಕಳೆದ ಎಂಟು ವರ್ಷಗಳಿಂದ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆಕೆಯ ಮಗ ಆರು ವರ್ಷಗಳ ಕಾಲ ಜೈಲಿನ ನಾಲ್ಕು ಗೋಡೆಗಳ ನಡುವೆ ತನ್ನ ಬಾಲ್ಯವನ್ನು ಕಳೆದು ಈಗ ಹೊರಗೆ ಬಂದಿದ್ದಾನೆ. ಆಕೆಯ ವಿರುದ್ಧ ಪೊಲೀಸರು ಸುಮಾರು 58 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವು ಕೊನೆಗೊಳ್ಳುವ ಲಕ್ಷಣಗಳಿಲ್ಲ. ಮತ್ತೊಬ್ಬ ನಕ್ಸಲ್ ಪದ್ಮನಾಭ ಜಾಮೀನು ಪಡೆದಿದ್ದಾನೆ, ಆದರೆ ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದಾಡುವುದೇ ಆತನ ಕೆಲಸವಾಗಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top