ತಹಶೀಲ್ದಾರ್‌ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ : ರಾಜ್ಯಪಾಲರಿಗೆ ಬಂದ ಪತ್ರದಲ್ಲಿದೆ ಬೇರೆಯೇ ಮಾಹಿತಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಿಎ ಆರೋಪಿಯಾಗಿರುವ ಪ್ರಕರಣಕ್ಕೆ ತಿರುವು

ಬೆಂಗಳೂರು: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ನ.5ರಂದು ಸಂಭವಿಸಿದ ಎಸ್‌ಡಿಎ ರುದ್ರೇಶ್ (ರುದ್ರಣ್ಣ ಯಡವಣ್ಣವರ) ಆತ್ಮಹತ್ಯೆ ಕೊಲೆ ಪ್ರಕರಣ ಎಂಬುದಾಗಿ ರಾಜ್ಯಪಾಲರಿಗೆ ಅನಾಮಧೇಯ ಪ್ರತವೊಂದು ಬರುವುದರೊಂದಿಗೆ ಈ ಪ್ರಕರಣ ತಿರುವು ಪಡೆದುಕೊಂಡಿದೆ. ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬಂದಿದೆ.

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ ನವೆಂಬರ್ 5ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು, ತನ್ನ ಸಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ತಹಶೀಲ್ದಾರ್​ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಕಾರಣ ಎಂದು ಹೆಸರು ಉಲ್ಲೇಖಿಸಿ ವಾಟ್ಸ್​ಆ್ಯಪ್ ಗ್ರೂಪೊಂದರಲ್ಲಿ ಸಂದೇಶ ಕಳುಹಿಸಿದ್ದರು.
ಪ್ರಕರಣದ ತಹಶೀಲ್ದಾರ್‌ ಬಸವರಾಜ ನಾಗರಾಳ, ಅಶೋಕ ಕಬ್ಬಲಿಗೇರ್, ಹೆಬ್ಬಾಳ್ಕರ್ ಪಿಎ ಸೋಮುಗೆ ಜಾಮೀನು ಸಿಕ್ಕ ಕೆಲವೇ ದಿನಗಳಲ್ಲಿ ಈ ಪತ್ರ ಬಂದಿರುವುದು ಕುತೂಹಲ ಕೆರಳಿಸಿದೆ. ಅಂಚೆ ಮೂಲಕ ಅನಾಮಧೇಯ ವ್ಯಕ್ತಿಯ ಪತ್ರ ಬಂದಿದೆ.
ಪತ್ರದಲ್ಲಿ, ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ. ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಕೊಲೆಗೆ ಸೂತ್ರಧಾರ. ತಹಶೀಲ್ದಾರರ ಜೀಪ್ ಚೆಕ್ ಮಾಡಿದರೆ ಎಲ್ಲ ಸಿಗುತ್ತವೆ. ಅದು ಸೂಸೈಡ್ ಅಂತಿದ್ದಾರೆ. ಆದರೆ ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಯಲ್ಲಪ್ಪನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲ ದುಡ್ಡು ಹೊಡೆದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು ಕೇಸ್ ಮುಚ್ಚಿ ಹಾಕಬಾರದು’ ಎಂದು ಬರೆಯಲಾಗಿದೆ. ಅನಾಮಧೇಯ ಪತ್ರದಲ್ಲಿನ ಅಂಶಗಳು ಕಂಡು ಇದೀಗ ಪೊಲೀಸರು ದಂಗಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನವೆಂಬರ್ 14ರಂದು ಷರತ್ತುಬದ್ಧ ನಿರೀಕ್ಷಣಾ ಜಾಮೀನು ದೊರೆತಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಕೇಳಿಬಂದ ಕಾರಣ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top