ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ

ಪುತ್ತೂರು: ಶ್ರೀಕ್ಷೇತ್ರ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಕ್ಷೇತ್ರದ ಪರಿವಾರ ಸಾನಿಧ್ಯಗಳಾದ ಧೂಮಾವತಿ ದೈವದ ನೇಮ ಹಾಗೂ ಅಪರಾಹ್ನ ವ್ಯಾಘ್ರಚಾಮುಂಡಿ ಹುಲಿಭೂತ ನೇಮೋತ್ಸವದೊಂದಿಗೆ ಈ ವರ್ಷದ ಮೊದಲ ಜಾತ್ರೋತ್ಸವ ಭಾನುವಾರ ಸಂಪನ್ನಗೊಂಡಿತು.

ವರ್ಷದ ಆದಿಯ ಜಾತ್ರೆ ಎಂದು ಪ್ರಸಿದ್ದಿ ಪಡೆದಿರುವ ಕ್ಷೇತ್ರದ ಜಾತ್ರೋತ್ಸವದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಉತ್ಸವ ಬಲಿ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ, ಮಂತ್ರಾಕ್ಷತೆಯಾಗಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು.

ರಾತ್ರಿ ದೇವರ ಮಹಾಪೂಜೆ, ಶ್ರೀಜಟಾಧಾರಿ ದೈವದ ಭಂಡಾರ ತೆಗೆದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೧ರಿಂದ ಜಟಾಧಾರಿ ದೈವದ ಮಹಿಮೆ ನಡೆಯಿತು.







































 
 

ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ, ಭೂತಬಲಿ ನಡೆದು ವಸಂತಕಟ್ಟೆ ಪೂಜೆ ನಡೆಯಿತು. ಬಳಿಕ ದೇವಳದಿಂದ ಹೊರಟು ದೇವರ ಸವಾರಿ ನಡೆಯಿತು. ದಾರಿಯುದ್ದಕ್ಕೂ ಕಟ್ಟೆಪೂಜೆ, ಭಕ್ತಾದಿಗಳು ತಳಿರು ತೋರಣಗಳಿಂದ  ದೇವರನ್ನು ಬರಮಾಡಿಕೊಂಡರು. ದೇವರ ಮೂಲಸ್ಥಾನ ಬಿಲ್ವಗಿರಿ ಪ್ರವೇಶ ನಡೆದು ಕಟ್ಟೆಪೂಜೆ ನಡೆಯಿತು. ಇದೇ ವೇಳೆ ಆಕರ್ಷಕ ’ಬೆಟ್ಟಂಪಾಡಿ ಬೆಡಿ’ ಪ್ರದರ್ಶನಗೊಂಡಿತು. ಬಿಲ್ವಗಿರಿಯಿಂದ ಹಿಂತಿರುಗಿ ಕೆರೆ ಉತ್ಸವ ನಡೆಯಿತು. ಪುನಃ ದೇವಾಲಯದ ಒಳಗಾಗಿ ಮಂಗಳಾರತಿ ನಡೆಯಿತು

ಜಾತ್ರೋತ್ಸವದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ವಿವಿಧ ಜನ ಪ್ರತಿನಿಧಿಗಳು, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಊರ ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top