ಭಾರತದ 51ನೇ ಮುಖ್ಯ ನ್ಯಾಯಮೂರ್ತಿ
ಹೊಸದಿಲ್ಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಖನ್ನಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಅವರು ಮೇ 13, 2025 ರವರೆಗೆ ಅಧಿಕಾರದಲ್ಲಿರುತ್ತಾರೆ.
ನ್ಯಾಯಮೂರ್ತಿ ಖನ್ನಾ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸುವುದು, ಆರ್ಟಿಕಲ್ 370 ರದ್ದತಿಯನ್ನು ಎತ್ತಿಹಿಡಿಯುವುದು ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವಾರು ಮಹತ್ವದ ತೀರ್ಪು ನೀಡಿದ ಪೀಠದಲ್ಲಿದ್ದರು.
ಎರಡು ವರ್ಷಗಳ ಕಾಲ ಸಿಜೆಐ ಆಗಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಭಾನುವಾರ ನಿವೃತ್ತರಾಗಿದ್ದು, ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಖನ್ನಾ ಅಧಿಕಾರ ವಹಿಸಿಕೊಂಡರು. ಚಂದ್ರಚೂಡ್ ಬಳಿಕ ಖನ್ನಾ ಹಿರಿತನದಲ್ಲಿ ಮೊದಲಿಗರಾಗಿದ್ದರು. ಅವರ ಹೆಸರನ್ನು ಅ.17ರಂದು ಚಂದ್ರಚೂಡ್ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಖನ್ನಾ 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ಸೇರ್ಪಡೆಯಾಗಿ ದಿಲ್ಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿ ವೃತ್ತಿ ಪ್ರಾರಂಭಿಸಿದರು. ಸಂವಿಧಾನಾತ್ಮಕ ಕಾನೂನು, ನೇರ ತೆರಿಗೆಗಳು, ಮಧ್ಯಸ್ಥಿಕೆ ಮತ್ತು ವಾಣಿಜ್ಯ ವಿಷಯಗಳು, ಕಂಪನಿ ಕಾನೂನು, ಭೂ ಕಾನೂನುಗಳು, ಪರಿಸರ ಮತ್ತು ಮಾಲಿನ್ಯ ಕಾನೂನುಗಳು ಮತ್ತು ವೈದ್ಯಕೀಯ ನಿರ್ಲಕ್ಷ್ಯದಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ನಿಯಮಿತವಾಗಿ ಹೈಕೋರ್ಟ್ ಮತ್ತು ನ್ಯಾಯಾಧಿಕರಣಗಳಲ್ಲಿ ಕಾಣಿಸಿಕೊಂಡಿದ್ದರು.
ಹೈಕೋರ್ಟ್‌ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ನ್ಯಾಯಾಲಯದಿಂದ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ವಾದಿಸಿದ್ದರು.
2005ರಲ್ಲಿ ದಿಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲ್ಪಟ್ಟ ಅವರು 2006ರಲ್ಲಿ ಖಾಯಂ ನ್ಯಾಯಾಧೀಶರಾದರು. ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಖನ್ನಾ ಅವರು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದು ಸೇರಿದಂತೆ ವಿವಿಧ ತೀರ್ಪುಗಳನ್ನು ನೀಡಿದ್ದರು.
























