ಕಡಬ: ಎರಡು ದಿನಗಳ ಹಿಂದೆ ಪುಳಿಕುಕ್ಕು ಎಂಬಲ್ಲಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರ ಬಿದ್ದ ಪರಿಣಾಮ, ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಸಾವಿನ ಬಳಿಕ ಸ್ಥಳದಲ್ಲಿ ಪವಾಡವೊಂದು ನಡೆದಿದೆ.
ಸೀತಾರಾಮ ಅವರು ತಮ್ಮ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಳಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತ್ತು. ಘಟನೆಯ ವೇಳೆ ಕೋಳಿಯ ಕಾಲುಗಳನ್ನು ಹಗ್ಗದಿಂದ ಕಟ್ಟಿದ್ದರಿಂದ ಮೃತದೇಹದ ಬಳಿಯೇ ಕೋಳಿ ಬಿದ್ದಿತ್ತು. ಬಳಿಕ ಸ್ಥಳದಲ್ಲಿದ್ದವರು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ರವನ್ನು ಬಿಚ್ಚಿದ್ದರು. ಆಗ ಹತ್ತಿರದ ಕಾಡಿನೊಳಗೆ ಹೋಗಿದ್ದ ಕೋಳಿ, ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರು ಚದುರಿದ ಬಳಿಕ ಮತ್ತೆ ಅದೇ ಜಾಗಕ್ಕೆ ಬಂದಿದೆ.
ನಜ್ಜುಗುಜ್ಜಾಗಿದ್ದ ಸೀತಾರಾಮ ಅವರ ಸ್ಕೂಟಿಯ ಮೇಲೆ 2 ದಿನದಿಂದ ಬಂದು ಕುಳಿತಿದ್ದು, ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿದೆ. ಇದೀಗ ಹರಕೆಯ ಕೋಳಿಯ ವರ್ತನೆಯಿಂದ ಸ್ಥಳೀಯರು ಅಚ್ಚರಿಗೊಂಡಿದ್ದಾರೆ.