ದುಬಾರಿ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸುತ್ತಿದ್ದ ಕಿಲಾಡಿಗಳು
ಮಂಗಳೂರು : ಅಮೆಜಾನ್ ಕಂಪನಿಗೆ ಬರೊಬ್ಬರಿ 30 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಮಂಗಳೂರಿನ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ರಾಜಕುಮಾರ್ ಮೀನಾ (23) ಮತ್ತು ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.
ಆರೋಪಿಗಳು ಅಮೆಜಾನ್ನಲ್ಲಿ ಬೆಲೆಬಾಳುವ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರು. ವಸ್ತುಗಳ ಡೆಲಿವರಿ ಪಡೆಯಲು ಮಂಗಳೂರಿನಂಥ ಎರಡನೇ ಹಂತದ ನಗರಗಳ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು ವಿಮಾನದಲ್ಲಿ ಹೋಗುತ್ತಿದ್ದರು.
ವಸ್ತುಗಳು ಡೆಲಿವರಿ ಆದ ನಂತರ ಬಾಕ್ಸ್ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಬದಲು ಮಾಡಿ ಬೇರೆ ಕಳಪೆ ವಸ್ತು ಇಟ್ಟು ರಿಟರ್ನ್ ಮಾಡುತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಳ್ಳತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ಗೆ ಮಾರಾಟ ಮಾಡುತ್ತಿದ್ದರು. ಐಟಂ ರಿಟರ್ನ್ ಆದ ಬಳಿಕ ಆರ್ಡರ್ಗೆ ಬಳಸಿದ ಸಿಮ್ ಕಿತ್ತೆಸೆಯುತ್ತಿದ್ದರು. ವಸ್ತು ಅಮೆಜಾನ್ ಗೋದಾಮು ತಲುಪಿದ ಬಳಿಕವಷ್ಟೇ ಈ ವಂಚನೆ ಬೆಳಕಿಗೆ ಬರುತ್ತಿತ್ತು.
ಆರೋಪಿಗಳು ಕಳೆದ 5-6 ವರ್ಷಗಳಿಂದ ಈ ರೀತಿ ವಂಚನೆ ಮಾಡುತ್ತಿದ್ದರು. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದಿಲ್ಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ವಂಚನೆ ಮಾಡಿದ್ದಾರೆ. ಆದರೆ ಅವರನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಈಗ ಮಂಗಳೂರಿನಲ್ಲಿ ಇದೇ ಶೈಲಿಯಿಂದ ವಂಚಿಸಿ ಉರ್ವ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉರ್ವ ಠಾಣೆಯಲ್ಲಿ ಸೆ.21ರಂದು ಅಮೆಜಾನ್ ಕಂಪನಿಯ ಡೆಲಿವರಿ ಬಾಯ್ ಒಬ್ಬರು ಮೋಸದ ಬಗ್ಗೆ ಪ್ರಕರಣ ದಾಖಲಿಸಿದ್ದರು.