ಕುತೂಹಲ ಕೆರಳಿಸಿದ ಕಾಂತಾರ ನಟನ ಲುಕ್
ಬೆಂಗಳೂರು : ಕಾಂತಾರ ಮೂಲಕ ದೇಶದಲ್ಲೇ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಈಗ ಹನುಮಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಾಂತಾರ ಮುಂದಿನ ಭಾಗದ ಚಿತ್ರೀಕರಣ ನಡೆಯುತ್ತಿರುವಂತೆಯೇ ರಿಷಬ್ ಶೆಟ್ಟಿ ಜೈ ಹನುಮಾನ್ ಚಿತ್ರದಲ್ಲಿ ಹನುಮಾನ್ ಆಗಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ.
ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಹನು-ಮ್ಯಾನ್ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಈ ಸಿನಿಮಾದ ಮುಂದುವರಿದ ಭಾಗ ‘ಜೈ ಹನುಮಾನ್’ ತೆರೆಗೆ ಬರಲಿದೆ. ಚಿತ್ರೀಕರಣ ನಡೆಯುತ್ತಿದ್ದು ಈ ಸಿನಿಮಾ ಕೂಡ 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಜೈ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹನುಮನ ಪಾತ್ರ ಮಾಡುತ್ತಿದ್ದು ಇದರ ಮೊದಲ ಲುಕ್ ನಿನ್ನೆ ರಿಲೀಸ್ ಮಾಡಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ಹನು-ಮ್ಯಾನ್ ಸಿನಿಮಾ ತೆಲುಗು ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ, ಸ್ಟಾರ್ ನಟರ ಸಿನಿಮಾಗಳಿಗೆ ಸಡ್ಡು ಹೊಡೆದು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹೊಸಬರ ಸಿನಿಮಾವಾದರೂ ತಂತ್ರಜ್ಞಾನ, ಅಧ್ಯಾತ್ಮ ಎಲ್ಲವನ್ನೂ ಮಿಳಿತಗೊಳಿಸಿದ ಒಂದು ಫ್ಯಾಂಟಸಿ ಸಿನಿಮಾವಾಗಿ ಕೌಟುಂಬಿಕ ಪ್ರೇಕ್ಷಕರ ಮನ ಗೆದ್ದಿತ್ತು. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಇದೀಗ ಭಾರಿ ಬಜೆಟ್ನಲ್ಲಿ ಜೈ ಹನುಮಾನ್ ಸಿನಿಮಾ ತೆರೆಗೆ ತರಲು ತಂಡ ಸಜ್ಜಾಗಿದೆ. ಎರಡನೇ ಭಾಗದಲ್ಲಿ ಹನುಮನ ಪಾತ್ರ ಸಾಕಷ್ಟು ಪ್ರಮುಖವಾಗಿರುವ ಕಾರಣ, ದೊಡ್ಡ ನಟರೊಬ್ಬರು ಈ ಪಾತ್ರ ಮಾಡಬೇಕು ಎನ್ನುವುದು ಚಿತ್ರತಂಡದ ಆಸೆಯಾಗಿತ್ತು. ಸಿನಿಮಾ ತಂಡ ರಿಷಬ್ ಶೆಟ್ಟಿಯವರನ್ನು ಪಾತ್ರಕ್ಕಾಗಿ ಸಂಪರ್ಕಿಸಿದ್ದು, ರಿಷಬ್ ಶೆಟ್ಟಿ ಕೂಡ ಒಪ್ಪಿಕೊಂಡಿದ್ದಾರೆ.
ರಿಷಬ್ ಶೆಟ್ಟಿ, ರಾಮನ ವಿಗ್ರಹವನ್ನು ತಬ್ಬಿಕೊಂಡು ಕುಳಿತಿರುವ ಹನುಮನ ದೃಶ್ಯದ ಫಸ್ಟ್ ಲುಕ್ ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ – ಜೈ ಹನುಮಾನ್ ಎಂದು ರಿಷಬ್ ಹೇಳಿದ್ದಾರೆ.