ಕಾಸರಗೋಡು: ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ನಿನ್ನೆ ತಡರಾತ್ರಿ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ಜನರನ್ನು ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದವರ ಕಥೆಗಳು ಬೆಳಕಿಗೆ ಬರುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ದೈವ ನರ್ತಕನೇ ತನ್ನ ಪ್ರಾಣಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ನಡುವೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ.
ರಾತ್ರಿ 12.30 ವೇಳೆಗೆ ದೈವಸ್ಥಾನದಲ್ಲಿ ಭೀಕರ ದುರಂತ ಸಂಭವಿಸಿದೆ. ಈ ವೇಳೆ ತೆಯ್ಯಂ (ದೈವ) ಆವೇಶವಾಗಿ ನರ್ತನ ನಡೆಯುತ್ತಿತ್ತು. ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ ಇದ್ದ ಪಟಾಕಿ ದಾಸ್ತಾನು ಸಿಡಿಯಲಾರಂಭಿಸಿದೆ. ಬೆಂಕಿಯ ಉಂಡೆಗಳು ಗಗನಕ್ಕೇರತೊಡಗಿದ್ದು, ಇದನ್ನು ನೋಡಿದ ಜನ ಹೆದರಿ ದಾರಿ ಸಿಕ್ಕಿದೆಡೆಗೆ ಓಡಿದ್ದಾರೆ. ಈ ಸಂದರ್ಭದಲ್ಲಿ ಚಿಕ್ಕ ಮಗುವೊಂದು ಬೆಂಕಿಯ ನಡುವೆ ಸಿಕ್ಕಿ ಹಾಕಿಕೊಂಡಿತ್ತು.
ಪಕ್ಕದಲ್ಲೇ ಇದ್ದ ದೈವ ಇದನ್ನು ನೋಡಿ ಧಾವಿಸಿ ಹೋಗಿ ಬೆಂಕಿಯ ನಡುವಿನಿಂದ ಮಗುವನ್ನು ಎತ್ತಿಕೊಂಡು ಬಂದಿದೆ. ಅದೃಷ್ಟವಶಾತ್ ಮಗುವಿಗೆ ಚಿಕ್ಕಪುಟ್ಟ ಗಾಯ ಮಾತ್ರ ಆಗಿತ್ತು.
ಅಂದಹಾಗೇ ದೈವ ನರ್ತಕ ನಿಧಿನ್ ಪಣಿಕ್ಕರ್ ವೃತ್ತಿಯಿಂದ ಪೊಲೀಸ್ ಅಧಿಕಾರಿ. ದೈವಸ್ಥಾನದ ವಾರ್ಷಿಕ ಕಳಿಯಾಟ್ಟಂಗೆ ಅವರು ತಪ್ಪದೆ ತೆಯ್ಯಂ ಸೇವೆ ಮಾಡುತ್ತಾರೆ. ಬೆಂಕಿ ಹತ್ತಿಕೊಂಡಾಗ ಅವರ ಕರ್ತವ್ಯ ಪ್ರಜ್ಞೆ ಜಾಗೃತವಾಗಿತ್ತು. ದೈವರ ಪೋಷಾಕಿನಲ್ಲೇ ಅವರು ರಕ್ಷಣಾ ಕಾರ್ಯ ಮಾಡಿದ್ದಾರೆ.
ಎಲ್ಲೆಡೆ ಕೋಲಾಹಲ, ಬೊಬ್ಬೆ ಕೇಳಿಸಲಾರಂಭಿಸಿತು. ಜನರು ಹೆದರಿ ಓಡುತ್ತಿದ್ದರು. ಈ ನಡುವೆ ಬೆಂಕಿಯ ನಡುವಿನಿಂದ ಮಗುವಿನ ಅಳು ಕೇಳಿಸಿತು. ಆ ಕ್ಷಣ ನನಗೇನಾಗಬಹುದು ಎಂದು ಯೋಚಿಸಲಿಲ್ಲ. ಹೇಗಾದರೂ ಮಗುವನ್ನು ರಕ್ಷಿಸಬೇಕೆಂದು ಮಾತ್ರ ನನ್ನ ಮನಸ್ಸಿನಲ್ಲಿತ್ತು. ಹೀಗಾಗಿ ಬೆಂಕಿಯ ಮಧ್ಯೆ ನುಗ್ಗಿದೆ. ದೈವ ಕೃಪೆಯಿಂದ ನನಗೂ, ಮಗುವಿಗೂ ಹೆಚ್ಚು ಹಾನಿಯಾಗಿಲ್ಲ ಎಂದು ನಿಧಿನ್ ಪಣಿಕ್ಕರ್ ಹೇಳಿದ್ದಾರೆ.