ಕರ್ನಾಟಕದ ಬೀಚ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ?

ಟೆಂಟ್‌ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮದ್ಯಪಾನ, ಮಾರಾಟಕ್ಕೆ ಅವಕಾಶ ಕೊಡಲು ಚಿಂತನೆ

ಮಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಗೋವಾದ ಮಾದರಿಯಲ್ಲಿ ರಾಜ್ಯದ ಬೀಚ್‌ಗಳಲ್ಲಿ ಟೆಂಟ್ ಹಾಕುವುದು ಮತ್ತು ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಮಂಗಳೂರಿನಲ್ಲಿ ನಡೆದ ‘ಕನೆಕ್ಟ್ 2024’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆ.ವಿ, ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಾವು ಬೀಚ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಬೀಚ್‌ಗಳಲ್ಲಿ ಮದ್ಯ ಬಳಕೆಯ ಮೇಲೆ ಇರುವ ನಿರ್ಬಂಧಗಳನ್ನು ಸಡಿಲಿಸುವ ಅಗತ್ಯವಿದೆ ಎಂದಿದ್ದಾರೆ.
ಬೀಚ್‌ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು, ಜನರು ರಾತ್ರಿಯಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಲು ಕಡಲ ತೀರಗಳಲ್ಲಿ ಹೆಚ್ಚಿನ ಲೈಟ್‌ಗಳನ್ನು ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಟೆಂಟ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಡಲ ತೀರಗಳ ಬಳಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಹುಡುಕುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಡರಾತ್ರಿಯವರೆಗೂ ಬೀಚ್‌ಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರದಲ್ಲಿರುವ ರೆಸ್ಟೋರೆಂಟ್‌ಗಳು ಮತ್ತು ಇತರ ಪರವಾನಗಿ ಪಡೆದ ವ್ಯಾಪಾರ ಸಂಸ್ಥೆಗಳ ವ್ಯವಹಾರದ ಸಮಯವನ್ನು ರಾತ್ರಿ 1 ಗಂಟೆಯ ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ನಗರ ವ್ಯಾಪ್ತಿಯ ಬೀಚ್‌ಗಳಲ್ಲಿ ತಡರಾತ್ರಿ ವರೆಗೆ ಇರಲು ಅವಕಾಶ ಒದಗಿಸಬೇಕಾಗಿದೆ ಎಂದಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಪ್ರಯತ್ನಗಳ ಭಾಗವಾಗಿ ಬಟಪಾಡಿ ಬೀಚ್‌ನಿಂದ ಸಸಿಹಿತ್ಲು ಬೀಚ್‌ವರೆಗಿನ ಕರಾವಳಿ ಪ್ರದೇಶವನ್ನು ಅಭಿವೃದ್ದಿಗೆ ನಕ್ಷೆ ಸಿದ್ದಪಡಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ರಾಜೇಂದ್ರ ಕೆ.ವಿ. ನಿರ್ದೇಶನ ನೀಡಿದ್ದಾರೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top