ಫಲಾನಭವಿಗಳ ಖಾತೆಗೆ ಹಣ ವರ್ಗಾವಣೆ ವ್ಯವಸ್ಥೆಯಲ್ಲಿ ಬದಲಾವಣೆಯಿಲ್ಲ
ಬೆಂಗಳೂರು : ಅನ್ನಭಾಗ್ಯ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ. ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಸದ್ಯಕ್ಕೆ ಮುಂದುವರಿಯಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯಕ್ಕೆ ಕೆಜಿಗೆ 28 ರೂ.ಯಂತೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೆಚ್ಚುವರಿಯಾಗಿ ಅಗತ್ಯವಿರುವ 20,000 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರ ಬೇರೆಡೆಗಳಿಂದ ಸಂಗ್ರಹಿಸಲಿದೆ. ಆದರೆ ಸದ್ಯಕ್ಕೆ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಯ ಹಣ 170 ರೂ. ವರ್ಗಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.
2023-24ರಲ್ಲಿ ಕರ್ನಾಟಕಕ್ಕೆ ವಾರ್ಷಿಕ 27.48 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 34.6 ರೂಪಾಯಿಗೆ ನೀಡಲು ಕೇಂದ್ರ ನಿರಾಕರಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಚುನಾವಣಾ ಪೂರ್ವ ಭರವಸೆಯಂತೆ 5 ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ ನೀಡಲು ಪ್ರಾರಂಭಿಸಿತ್ತು. ಈಗ ಕೇಂದ್ರ ಸರಕಾರ ಅಕ್ಕಿ ನೀಡಲು ಮುಂದೆ ಬಂದಿದೆ. ಈ ನಡುವೆ 170 ರೂ. ನಗದು ಬದಲು ಅಷ್ಟೇ ಬೆಲೆಯ ಅಡುಗೆ ಎಣ್ಣೆ ಮತ್ತು ಬೇಳೆಕಾಳು ಫಲಾನುಭವಿಗಳಿಗೆ ನೀಡುವ ಸಾಧ್ಯತೆಯೂ ಪರಿಶೀಲನೆಯಲ್ಲಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗುವ ತನಕ ಹಣ ವರ್ಗಾವಣೆ ಮುಂದುವರಿಯಲಿದೆ.
13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದಲ್ಲಿ 13.87 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಕೆ. ಎಚ್ ಮುನಿಯಪ್ಪ ಇದೇ ವೇಳೆ ಮಾಹಿತಿ ನೀಡಿದ್ದಾರೆ. ಈಗಾಗಲೇ 3.64 ಲಕ್ಷ ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್‌ಗಳು ಸೇರಿವೆ ಎಂದು ತಿಳಿಸಿದ್ದಾರೆ.
6 ತಿಂಗಳವರೆಗೆ ಪಡಿತರ ಪಡೆಯದಿರುವವರು, ಒಂದು ವರ್ಷದವರೆಗೆ ನೇರ ನಗದು ವರ್ಗಾವಣೆ ಸೌಲಭ್ಯ ಪಡೆಯದಿರುವವರು ಮತ್ತು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರನ್ನು ಅನರ್ಹರೆಂದು ಪರಿಗಣಿಸಲಾಗುತ್ತಿದೆ. ಅನರ್ಹ ಪಡಿತರ ಚೀಟಿಗಳ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯದೆ ಕಾರ್ಡ್ ರದ್ದಾದರೆ ಮುಂದಿನ ದಿನಗಳಲ್ಲಿ ಹೊಸ ಕಾರ್ಡ್‌ಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.