ಕೋರ್ಟ್‌ಗಳಲ್ಲಿ ನ್ಯಾಯದೇವತೆಯ ಕಣ್ಣಿನ ಪಟ್ಟಿ ಬಿಚ್ಚಿದ ಮೂರ್ತಿ ಸ್ಥಾಪನೆಗೆ ಸೂಚನೆ
ಹೊಸದಿಲ್ಲಿ: ಯಾರೂ ಇನ್ನು ಮುಂದೆ ನ್ಯಾಯ ಕುರುಡು ಎಂದು ಹೇಳುವಂತಿಲ್ಲ. ಯಾಕೆಂದರೆ ಕೋರ್ಟ್‌ಗಳಲ್ಲಿ ಇನ್ನು ನ್ಯಾಯದೇವತೆ ಎಲ್ಲರನ್ನೂ ಕಣ್ತೆರೆದು ನೋಡುತ್ತಾಳೆ. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯದೇವತೆ ಪ್ರತಿಮೆಯನ್ನು ಬದಲಾಯಿಸಲಾಗಿದೆ. ನ್ಯಾಯಾಲಯಕ್ಕೆ ಬರುವ ಯಾರೇ ಆಗಿರಲಿ ಯಾವುದೇ ಬೇಧವಿಲ್ಲದೆ ನೋಡುವ ಸಂಕೇತವಾಗಿ ನ್ಯಾಯದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಲಾಗಿರುತ್ತದೆ. ಆದರೆ ಇನ್ನು ಮುಂದೆ ನ್ಯಾಯದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟುವಂತಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೊಸ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವ ನ್ಯಾಯದೇವತೆ ಮೂರ್ತಿ ಇನ್ನು ಕಾಣಲು ಸಿಗುವುದಿಲ್ಲ.
ಇಲ್ಲಿಯವರೆಗೆ ಇದ್ದ ನ್ಯಾಯದೇವತೆ ಮೂರ್ತಿಯ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಲಾಗಿತ್ತು. ಒಂದು ಕೈಯಲ್ಲಿ ತಕ್ಕಡಿ ಮತ್ತೊಂದು ಕೈಯಲ್ಲಿ ಖತ್ತಿ ಹಿಡಿದ ಪ್ರತಿಮೆ ಪ್ರತಿ ಕೋರ್ಟ್‌ನಲ್ಲಿರುತ್ತಿದ್ದವು. ಸಿಜೆಐ ಚಂದ್ರಚೂಡ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಿದ್ದಾರೆ. ಇಂತಹದ್ದೇ ಮೂರ್ತಿಯನ್ನು ಪ್ರತಿ ಕೋರ್ಟ್‌ನಲ್ಲಿ ಪ್ರತಿಷ್ಠಾಪಿಸುವಂತೆ ಸೂಚನೆ ನೀಡಿದ್ದಾರೆ.
ನ್ಯಾಯದೇವತೆ ಹೊಸಮೂರ್ತಿಯ ಕಣ್ಣಿಗೆ ಬಟ್ಟೆ ಕಟ್ಟಿರುವುದಿಲ್ಲ. ನ್ಯಾಯದೇವತೆಯ ಕೈಯಲ್ಲಿ ಖಡ್ಗದ ಬದಲು ಭಾರತದ ಸಂವಿಧಾನ ಪುಸ್ತಕ ಇರುತ್ತದೆ. ಸಿಜೆಐ ಆದೇಶದಂತೆ ಈಗಾಗಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಲಾಗಿದೆ.
ನಮ್ಮ ದೇಶದಲ್ಲಿ ಕಾಣುವ ನ್ಯಾಯದೇವತೆಯ ಮೂರ್ತಿ ಮೂಲತಃ ರೋಮ್ ಸಾಮ್ರಾಜ್ಯದ ಕಲ್ಪನೆ. ಇದು ಮೊದಲ ಬಾರಿ ಕಂಡು ಬಂದಿದ್ದು ರೋಮ್ನ ಆಗಸ್ಟಸ್ ಸಾಮ್ರಾಜ್ಯದಲ್ಲಿ. ಲೇಡಿ ಆಫ್ ಜಸ್ಟಿಸ್ ರೋಮನ್ ಪುರಾಣಗಳಲ್ಲಿ ಬರುವ ಜಸ್ಟಿಟಿಯಾ ಎಂಬ ದೇವತೆ. ಅವಳು ನ್ಯಾಯಕ್ಕೆ ಅಧಿಪತಿ. 16ನೇ ಶತಮಾನದಲ್ಲಿ ಮೊದಲ ಬಾರಿ ಈ ನ್ಯಾಯದೇವತೆಯ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಯಿತು. ಯಾರಿಗೂ ಕೂಡ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ, ನ್ಯಾಯದೇವತೆಯೂ ಕೂಡ ಬಂದ ಆರೋಪಿಗಳಲ್ಲಿ ಬೇಧ ಭಾವ ಎಣಿಸದಿರಲಿ ಎಂಬ ಉದ್ದೇಶದಿಂದ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಕಟ್ಟಲಾಯ್ತು.
16ನೇ ಶತಮಾನದಿಂದಲೂ ನ್ಯಾಯದೇವತೆ ಇದೇ ರೀತಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಹಾಗೂ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡ ರೂಪದಲ್ಲಿಯೇ ಇದ್ದಾಳೆ. ವಿಶ್ವದ ಅನೇಕ ರಾಷ್ಟ್ರಗಳ ಕೋರ್ಟ್‌ನಲ್ಲಿ ಇದೇ ನ್ಯಾಯದೇವತೆಯನ್ನು ಕೋರ್ಟ್‌ನಲ್ಲಿ ಇಡಲಾಗಿದೆ.
ಸಿಜೆಐ ಚಂದ್ರಚೂಡ್ ಈ ವಸಾಹತುಶಾಹಿ ಪರಂಪರೆಯನ್ನು ಮೀರಿ ಮುನ್ನಡೆಯುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾನೂನು ಕುರುಡಲ್ಲ; ಅದು ಎಲ್ಲರನ್ನು ಸಮಾನವಾಗಿ ನೋಡುತ್ತದೆ ಎಂಬ ಆಶಯ ಹೊಸ ಮೂರ್ತಿಯ ಹಿಂದೆ ಇದೆ ಎಂದು ಅವರು ಹೇಳಿದ್ದಾರೆ.