ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ

ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಎಂಟು ದಶಕ ಬದುಕಿದ್ದು ಅದ್ಭುತ!

ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು ನಮ್ಮನ್ನಗಲಿ ಹೋಗಿರುವುದರಿಂದ ದಸರಾ ಸಂಭ್ರಮದ ನಡುವೆ ದೇಶದಲ್ಲಿ ಸೂತಕದ ಛಾಯೆ ಹರಡಿದಂತಾಗಿದೆ. ರತನ್‌ ಟಾಟಾ ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಯುಗ ಪುರುಷ ಎಂದರೆ ಅತಿಶಯೋಕ್ತಿ ಆಗಲಾರದು. ಶತಮಾನಗಳ ಕಾಲ ವಿದೇಶಿಗರ ಆಳ್ವಿಕೆಗೆ ಒಳಗಾಗಿ ದೇಶ ತನ್ನ ಅಂತಃಸ್ಸತ್ವವನ್ನೇ ಕಳೆದುಕೊಂಡು ನಿಸ್ತೇಜವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು ಟಾಟಾ ಕಂಪನಿ. ಆ ಟಾಟಾ ಪರಿವಾರದ ಕುಡಿಯಾಗಿರುವ ರತನ್‌ ಟಾಟಾ ಅವರಲ್ಲಿ ಉದ್ಯಮಶೀಲತೆ ಎಂಬುದು ರಕ್ತದಲ್ಲೇ ಬಂದಿತ್ತು. ಸ್ವಾತಂತ್ರ್ಯನಂತರ ಒಂದು ಗುಂಡುಸೂಜಿಯನ್ನು ಕೂಡ ವಿದೇಶದಿಂದ ಆಮದು ಮಾಡಿಕೊಳ್ಳಬೇಕೆಂಬ ಸ್ಥಿತಿಯಲ್ಲಿದ್ದ ದೇಶಕ್ಕೆ ಕೈಗಾರಿಕೋದ್ಯಮದ ಕ್ರಾಂತಿಯನ್ನು ಪರಿಚಯಿಸಿದ ಕೆಲವೇ ಕಂಪನಿಗಳಲ್ಲಿ ಟಾಟಾ ಕೂಡ ಒಂದು. ರತನ್‌ ಟಾಟಾ ನೇತೃತ್ವ ವಹಿಸಿದ ಬಳಿಕ ಟಾಟಾ ಸಮೂಹ ಅಗಾಧವಾಗಿ ಬೆಳೆಯಿತು ಎನ್ನುವುದು ನಿಜ. ಹಾಗೆಂದು ದೇಶದಲ್ಲಿ ಇರುವುದು ಟಾಟಾ ಕಂಪನಿ ಮಾತ್ರ ಅಲ್ಲ, ಇನ್ನೆಷ್ಟೋ ಕಂಪನಿಗಳು, ಉದ್ಯಮಿಗಳು ಇದ್ದಾರೆ. ಆದರೆ ಅವರಿಗ್ಯಾರಿಗೂ ಸಿಗದ ಜನರ ಮಮತೆ, ಗೌರವವನ್ನು ರತನ್‌ ಟಾಟಾ ಮಾತ್ರ ಹೇಗೆ ಸಂಪಾದಿಸಿದ್ದರು. ಇದಕ್ಕೆ ಕಾರಣ ರತನ್‌ ಅಂತಕರಣ ಉದ್ಯಮಿಯದ್ದಾಗಿರಲಿಲ್ಲ, ಬದಲಾಗಿ ಮನೆಯ ಯಜಮಾನನಂತಿರುವ ಹಿರಿಯನದ್ದಾಗಿತ್ತು. ಇಡೀ ದೇಶವನ್ನು ಅವರು ತನ್ನ ಪರಿವಾರ ಎಂದು ಭಾವಿಸಿದ್ದರು. ತನ್ನ ದೇಶ ಖುಷಿಯಾಗಿರಬೇಕೆಂದು ಭಾವಿಸುವ ಉದ್ಯಮಿಗೂ ತನ್ನ ಪರಿವಾರ ಸದಾ ಖುಷಿಯಾಗಿರಲಿ ಎಂದು ಬಯಸುವ ಮನೆಯ ಯಜಮಾನನಿಗೂ ವ್ಯತ್ಯಾಸವಿಲ್ಲ.

ಇಂತಹ ಆದರ, ಮಾನ್ಯತೆ ಸಿಗಲು ಕಾರಣ ರತನ್‌ ಟಾಟಾ ಉದ್ಯಮದಲ್ಲಿ ಮತ್ತು ಜೀವನದಲ್ಲಿ ಪಾಲಿಸಿದ ಮೌಲ್ಯಗಳು. ಈ ವಿಚಾರದಲ್ಲಿ ಟಾಟಾ ಕೈಗಾರಿಕೋದ್ಯಮಿಗಳಿಗೆ ಒಂದು ಉತ್ತಮವಾದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ದೇಶದ ಅಗ್ರಗಣ್ಯ ಉದ್ಯಮಿಯಾಗಿದ್ದರೂ ರತನ್‌ ಟಾಟಾ ಎಂದೂ ಶ್ರೀಮಂತಿಕೆಯ ಸ್ಪರ್ಧೆಗೆ ಇಳಿದವರು ಅಲ್ಲ. ಎಂದೂ ಟಾಟಾ ದೇಶದ ನಂಬರ್‌ ಒನ್‌ ಶ್ರೀಮಂತ ಉದ್ಯಮಿಯಾಗಲಿಲ್ಲ. ಯಾವ ವರ್ಷವೂ ಅವರ ಹೆಸರು ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸಲಿಲ್ಲ. ಗಳಿಸಿದ್ದರಲ್ಲಿ ಬಹುಪಾಲನ್ನು ಸಮಾಜಕ್ಕೆ ನೀಡಿ ರತನ್‌ ಟಾಟಾ ಶ್ರೀಮಂತರ ಸಾಲಿನಲ್ಲಿ ಬಡವರಾಗಿಯೇ ಉಳಿದರೂ ಅವರ ಹೃದಯ ಶ್ರೀಮಂತಿಕೆ ಮಾತ್ರ ಜನರ ಸಮೃದ್ಧ ಪ್ರೀತಿ ಗೌರವವನ್ನು ತಂದುಕೊಟ್ಟಿತು. ಇವತ್ತಿಗೂ ದೇಶದ ಅಗ್ರ ದಾನಿಗಳ ಪಟ್ಟಿಯನ್ನೊಮ್ಮೆ ನೋಡಿದರೆ ಅದರಲ್ಲಿ ರತನ್‌ ಟಾಟಾ ಅವರ ಹೆಸರೇ ಮೊದಲು ಕಾಣಿಸುತ್ತದೆ.





















































 
 

ಟಾಟಾ ಸನ್ಸ್, ಟಾಟಾ ಟ್ರಸ್ಟ್ ಸೇರಿ ಟಾಟಾ ಸಮೂಹ ಸಂಸ್ಥೆಗಳ ಒಟ್ಟು ಮಾರುಕಟ್ಟೆ ಮೌಲ್ಯ 33.7 ಲಕ್ಷ ಕೋಟಿ ರೂಪಾಯಿಯಾದರೆ ವೈಯಕ್ತಿಕವಾಗಿ ರತನ್ ಟಾಟಾ ಹೊಂದಿರುವುದು 3,800 ಕೋಟಿ ಆಸ್ತಿ ಮಾತ್ರ ಎಂಬ ಅಂಕಿಅಂಶ ಅವರು ಎಷ್ಟು ಉದಾರವಾಗಿದ್ದರು ಎನ್ನುವುದನ್ನು ತಿಳಿಸುತ್ತದೆ.

ದೇಶದ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯ ಒಡೆಯರಾದ ರತನ್ ಟಾಟಾ ಅವರು ಸರಳತೆ ಮತ್ತು ತಮ್ಮ ಮೌಲ್ಯಯುತವಾದ ಕೆಲಸದಿಂದ ಜನಮನ್ನಣೆಯನ್ನು ಪಡೆದಿದ್ದರು. ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಆಸರೆಯಾಗಿದ್ದ ಇವರು, ವೈಯಕ್ತಿಕವಾಗಿ ಹೆಚ್ಚಿನ ಆಸ್ತಿಯನ್ನು ಹೊಂದಿರಲಿಲ್ಲ. ಕೆಲವೊಂದು ಮೂಲಗಳ ಪ್ರಕಾರ ಅವರು ವೈಯಕ್ತಿಕವಾಗಿ ಮತ್ತು ಸಂಸ್ಥೆಯ ಪರವಾಗಿ ಇದುವರೆಗೆ ನೀಡಿದ ದೇಣಿಗೆಯ ಮೊತ್ತ 8,29,734 ಕೋಟಿ!
ಯಾಕೆ ಮುಕೇಶ್ ಅಂಬಾನಿಯವರು ಏಷ್ಯಾದ ಶ್ರೀಮಂತ ವ್ಯಕ್ತಿ, ರತನ್ ಟಾಟಾ ಯಾಕಿಲ್ಲ ಎನ್ನುವ ಪ್ರಶ್ನೆಯನ್ನು ಪತ್ರಕರ್ತರೊಬ್ಬರು ಒಮ್ಮೆ ಕೇಳಿದ್ದರು. ಅದಕ್ಕೆ ರತನ್‌ ಟಾಟಾ ಕೊಟ್ಟ ಕೊಟ್ಟ ಉತ್ತರ ಹೀಗಿತ್ತು, ʼಅವರೆಲ್ಲ ವಾಣಿಜ್ಯೋದ್ಯಮಿಗಳು, ನಾವು ಕೈಗಾರಿಕೋದ್ಯಮಿಗಳು. ನನ್ನ ದೇಶ ಭಾರತ ಬಲಿಷ್ಠ ಆರ್ಥಿಕತೆಯನ್ನು ಹೊಂದಿದ ದೇಶ ಎಂದು ನನಗೆ ನೋಡಲು ಇಷ್ಟವಿಲ್ಲ. ಬದಲಿಗೆ, ನನ್ನ ದೇಶ ಖುಷಿಯಾಗಿರುವ ರಾಷ್ಟ್ರ ಎಂದು ನಾನು ನೋಡಲು ಬಯಸುತ್ತೇನೆ.ʼ ಈ ಮಾತೇ ರತನ್‌ ಟಾಟಾ ದೇಶ ಮತ್ತು ಜನರನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ.

ರತನ್‌ ಟಾಟಾ ಬದುಕಿನ ಇನ್ನೊಂದು ಗಮನಾರ್ಹ ಅಂಶ ಎಂದರೆ ನಿಷ್ಕಳಂಕ ವ್ಯಕ್ತಿತ್ವ. ಎಂಟು ದಶಕಗಳ ಸುದೀರ್ಘ ಜೀವನದಲ್ಲಿ ರತನ್‌ ಟಾಟಾ ವೈಯಕ್ತಿಕವಾಗಲಿ, ಔದ್ಯೋಗಿಕವಾಗಲಿ ಒಂದೇ ಒಂದು ವಿವಾದಕ್ಕೆ ಸಿಲುಕಿದವರಲ್ಲ. ಇಷ್ಟು ಸುದೀರ್ಘವಾಗಿ ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಬದುಕುವುದು ಇಂದಿನ ಕಾಲದಲ್ಲಿ ಸಾಮಾನ್ಯ ವಿಚಾರವಲ್ಲ. ಅದೂ ಶ್ರೀಮಂತರನ್ನು, ಉದ್ಯಮಿಗಳನ್ನು ವಿವಾದದ ಸುಳಿಗೆ ಸಿಲುಕಿಸಲು ಸದಾ ಹೊಂಚು ಹಾಕಿ ಕುಳಿತಿರುವವರ ಮಧ್ಯೆ ರತನ್‌ ಟಾಟಾ ನಿಷ್ಕಳಂಕವಾಗಿ 86 ವರ್ಷ ಬದುಕಿದ್ದರು ಎನ್ನುವುದು ಒಂದು ಅದ್ಭುತವೇ ಸರಿ. ಕೋಟ್ಯಾಂತರ ಜನರು ದೇಶದಲ್ಲಿ ಹುಟ್ಟುತ್ತಾರೆ, ಆದರೆ ದೇಶಕ್ಕಾಗಿ ಹುಟ್ಟುವವರು ಕೆಲವರು ಮಾತ್ರ. ಜೀವನದುದ್ದಕ್ಕೂ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ರತನ್ ಟಾಟಾ, ಭಾರತದ ಕೈಗಾರಿಕೆಗಳಿಗೆ ಹೊಸ ರೂಪವನ್ನು ಕೊಟ್ಟು, ಮೌಲ್ಯಯುತ ಜೀವನವನ್ನು ನಡೆಸಿದ್ದವರು.

ರತನ್‌ ಟಾಟಾ ಅಗಲಿಕೆಯಿಂದ ದೇಶದ ಕೈಗಾರಿಕೋದ್ಯಮ ಕ್ಷೇತ್ರದ ಸಚ್ಚಾರಿತ್ರ್ಯದ ಒಂದು ಯುಗವೇ ಅಂತ್ಯವಾಯಿತು ಎನ್ನುವುದು ಖಂಡಿt ಉತ್ಪ್ರೇಕ್ಷೆಯ ಮಾತಲ್ಲ. ಹಾಗೇ ನೋಡಿದರೆ ಎಷ್ಟೇ ಘನ ಶಬ್ದಗಳಿಂದ ಬಣ್ಣಿಸಿದರೂ ರತನ್‌ ಟಾಟಾ ವ್ಯಕ್ತಿತ್ವ ಅದಕ್ಕಿಂತ ಒಂದು ತೂಕ ಮೇಲೆಯೇ ಇದೆ. ಒಂದರ್ಥದಲ್ಲಿ ಅವರನ್ನು ಬಣ್ಣಿಸುವಲ್ಲಿ ಶಬ್ದಗಳೆ ಸೋತುಹೋಗುತ್ತಿವೆ. ಇಡೀ ದೇಶ ಓರ್ವ ಉದ್ಯಮಿಗಾಗಿ ಈ ರೀತಿ ಮರುಗಿದ್ದು ಇದೇ ಮೊದಲು. ಮನೆಯ ಹಿರಿಯ ಯಜಮಾನ ಅಗಲಿದಂಥ ಗಾಢ ನೋವೊಂದು ದೇಶವನ್ನು ಆವರಿಸಿದೆ. ರತನ್‌ ಟಾಟಾರಂಥ ವ್ಯಕ್ತಿ ಇನ್ನೊಮ್ಮೆ ಹುಟ್ಟಿ ಬರುವುದು ಸಾಧ್ಯವಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top