ರಾಷ್ಟ್ರಪತಿ, ಪ್ರಧಾನಿಯಿಂದ ಸಂತಾಪ
ಮುಂಬಯಿ : ದೇಶದ ಅಗ್ರಗಣ್ಯ ಉದ್ಯಮಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಾವಲ್ ಹರ್ಮುಸ್ ಜಿ ಟಾಟಾ ಮತ್ತು ಸೂನಿ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರ 2008ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ.
ಅವಿವಾಹಿತ ರತನ್ ಟಾಟಾ ಅವರು ಶ್ರೇಷ್ಠ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ಟಾಟಾ ಸಮೂಹ ಅವರ ನೇತೃತ್ವದಲ್ಲಿ ಅಗಾಧವಾಗಿ ವಿಸ್ತರಿಸಿ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತು. ವಾಹನದಿಂದ ತೊಡಗಿ ಅಡುಗೆ ಉಪ್ಪಿನ ತನಕ ಪ್ರತಿಯೊಂದನ್ನು ಟಾಟಾ ಕಂಪನಿ ಉತ್ಪಾದಿಸುತ್ತಿದ್ದು, ಇದಕ್ಕೆಲ್ಲ ನಾಂದಿ ಹಾಡಿದ್ದು ರತನ್ ಟಾಟಾ. ತನ್ನ ಗಳಿಕೆಯನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸುತ್ತಿದ್ದ ರತನ್ ಟಾಟಾ ನಿಜಾರ್ಥದಲ್ಲಿ ದೇಶದ ಆಸ್ತಿಯಾಗಿದ್ದರು.
ರತನ್ ಟಾಟಾ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ವಾಸ್ತುಶಿಲ್ಪದಲ್ಲಿ ಪದವಿ ಪಡೆದಿದ್ದರು. ನಂತರ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಮ್ಯಾನೇಜ್ಮೆಂಟ್ ಪದವಿ ಓದಿದರು. 1961ರಲ್ಲಿ ಟಾಟಾ ಗ್ರೂಪ್ಗೆ ಸೇರಿದ ರತನ್ ಟಾಟಾ ಆರಂಭದಲ್ಲಿ ಕೆಳ ಹಂತದ ಸಿಬ್ಬಂದಿಯಾಗಿ ಕೆಲಸ ಮಾಡಿದರು. ಜೆಮ್ಶೆಡ್ಪುರದ ಟಾಟಾ ಸ್ಟೀಲ್ ಕಂಪನಿಯಲ್ಲಿ ಸಹಾಯಕರಾಗಿ ನೌಕರಿ ಮಾಡಿದ್ದರು. 1991ರಲ್ಲಿ ಟಾಟಾ ಸಮೂಹದ ಅಧ್ಯಕ್ಷರಾದರು. ಟಾಟಾ ಅವರ ನಾಯಕತ್ವದಲ್ಲಿ ಸಮೂಹವು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸಿತು.
ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ಟೆಕ್ನಾಲಾಜಿ, ಇಂಡಿಯನ್ ಹೋಟೆಲ್ಸ್, ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ರತನ್ ಟಾಟಾ ಸ್ಥಾಪಿಸಿ ದೇಶದ ಪ್ರಮುಖ ಉದ್ಯಮ ಸಂಸ್ಥೆಗಳಾಗಿ ಬೆಳೆಸಿದ್ದರು. ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅವರು ಬಹಳ ಆದ್ಯತೆ ಕೊಡುತ್ತಿದ್ದರು. ಈ ಕಾರಣಕ್ಕೆ ಇಂದಿಗೂ ಜನರು ಟಾಟಾ ಉತ್ಪನ್ನ ಎಂದರೆ ಕಣ್ಮುಚ್ಚಿ ಖರಿದಿಸುವಂಥ ವಿಶ್ವಾಸಾರ್ಹತೆಯನ್ನು ಹೊಂದಿವೆ. ಇದಕ್ಕೆ ಮೂಲ ಕಾರಣ ರತನ್ ಟಾಟಾ ಉದ್ಯಮದ ಬಗ್ಗೆ ಹೊಂದಿದ್ದ ದೃಷ್ಟಿಕೋನ.
ರತನ್ ಟಾಟಾ ಅವರು ಕೈಗಾರಿಕೋದ್ಯಮ, ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಹಳ ದಾನ ಧರ್ಮ ಮಾಡಿರುವ ರತನ್ ಟಾಟಾ ಔದಾರ್ಯದ ಸಾಕಾರ ಮೂರ್ತಿಯಾಗಿದ್ದರು.
ರಾಷ್ಟ್ರಪತಿ, ಪ್ರಧಾನಿ ಸಂತಾಪ
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಗಣ್ಯಾತಿಗಣ್ಯರು ರತನ್ ಟಾಟಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಹಿರಿಯ ಚೇತನಕ್ಕೆ ಅಶ್ರುತರ್ಪಣ ಸಲ್ಲಿಸಿದ್ದಾರೆ.
ರತನ್ ಟಾಟಾ ಜೊತೆಗಿನ ಒಡನಾಟದ ನೂರಾರು ನೆನಪುಗಳು ನನ್ನ ಮನಸ್ಸನ್ನು ತುಂಬಿಕೊಂಡಿವೆ. ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ಆಗಾಗ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅನೇಕ ವಿಚಾರಗಳಲ್ಲಿ ನಾವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೆವು. ಅವರ ದೃಷ್ಟಿಕೋನ, ಗ್ರಹಿಕೆಗಳು ಬಹಳ ಉನ್ನತವಾಗಿದ್ದವು. ನಾನು ದಿಲ್ಲಿಗೆ ಬಂದ ನಂತರವೂ ಅವರ ಭೇಟಿಗೆ ಸಿಗುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ನಿಧನದ ಸುದ್ದಿಯಿಂದ ಬಹಳ ದುಃಖವಾಗಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.
























