ಚನ್ನಪಟ್ಟಣ ಉಪಚುನಾವಣೆಗೆ ಹಣ ಹೊಂದಿಸಿಕೊಡಲು ಜೀವ ಬೆದರಿಕೆ ಎಂದು ಆರೋಪ
ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಮಾಜಿ ಪರಿಷತ್ ಸದಸ್ಯ ರಮೇಶ್ ಗೌಡ 50 ಕೋ.ರೂ.ಗೆ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ನಾಯಕ ವಿಜಯ್ ಟಾಟಾ ಎಂಬವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯ್ ಟಾಟಾ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷರಾಗಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಫಿಕ್ಸ್ ಆಗಿದೆ. ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು 50 ಕೋಟಿ ರೂ. ಹೊಂದಿಸಿಕೊಡಬೇಕು. ಹಣ ಹೊಂದಿಸಿ ಕೊಡದಿದ್ದರೆ ನಾನು ಏನು ಮಾಡುತ್ತೇನೋ ಗೊತ್ತಿಲ್ಲ. ನೀನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ. ನೀನು ಇಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ದೀರಿನಲ್ಲಿ ಆರೋಪಿಸಿದ್ದಾರೆ.
50 ಕೋಟಿ ರೂ. ಹಣ ಹೊಂದಿಸಿಕೊಡು. ನಾನು ದೇವಸ್ಥಾನ, ಶಾಲೆ ಅಭಿವೃದ್ಧಿ ಮಾಡುತ್ತಿದ್ದು ನನಗೂ 5 ಕೋಟಿ ರೂ. ಹಣ ನೀಡುವಂತೆ ಮಾಜಿ ಎಂಎಲ್ಸಿ ರಮೇಶ್ ಗೌಡ ಬೆದರಿಕೆ ಹಾಕಿದ್ದಾರೆ. ಹಣ ಕೊಡದೆ ಹೋದರೆ ನಿಮಗೂ ತೊಂದರೆಗಳು ಎದುರಾಗಲಿವೆ. ರಮೇಶ್ ಗೌಡ ನನಗೆ ಆಗಸ್ಟ್ 30, ಸೆಪ್ಟೆಂಬರ್ 06, ಮತ್ತು 11 ರಂದು ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ಮತ್ತು ರಮೇಶ್ ಗೌಡ ನನ್ನ ವಿರುದ್ಧ ಷಡ್ಯಂತ್ರ ಮಾಡಿ 50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಿ ಎಚ್.ಡಿ ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.