80 ಮಂದಿ ನಾಪತ್ತೆ; ಭೂ ಕುಸಿತ, ನೂರಾರು ಮನೆಗಳು ಜಲಾವೃತ
ಕಠ್ಮಂಡು: ನಿರಂತರ ಮಳೆಯಿಂದ ನೇಪಾಳದಲ್ಲಿ ಪ್ರವಾಹ ಉಂಟಾಗಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಮತ್ತು ಸುಮಾರು 80 ಮಂದಿ ನಾಪತ್ತೆಯಾಗಿದದಾರೆ. ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ವ್ಯಾಪಕ ನಾಶ ನಷ್ಟ ಸಂಭವಿಸಿದೆ.
ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾ ಪಡೆಗಳು ಸ್ಥಳಾಂತರಿಸುತ್ತಿವೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ. ಶನಿವಾರ ಹೆಲಿಕಾಪ್ಟರ್ಗಳು ಮತ್ತು ಮೋಟಾರ್ಬೋಟ್ಗಳೊಂದಿಗೆ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಮಾಡಿ ಅನೇಕರನ್ನು ರಕ್ಷಿಸಿದ್ದಾರೆ.
ಕಾಣೆಯಾದ ಜನರನ್ನು ರಕ್ಷಿಸಲು ಮತ್ತು ಹುಡುಕಲು ಪೊಲೀಸರು ಇತರ ಏಜೆನ್ಸಿಗಳು ಮತ್ತು ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೇಪಾಳದ ಕೆಲವು ಭಾಗಗಳು ಜಲಾವೃತಗೊಂಡಿವೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಬಸಂತ ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಈವರೆಗೂ 112 ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ 34 ಮಂದಿ ರಾಜಧಾನಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. 36 ಜನ ಗಾಯಗೊಂಡಿದ್ದಾರೆ. ಕಠ್ಮಂಡುವಿನಲ್ಲಿ 226 ಮನೆಗಳು ಮುಳುಗಡೆಯಾಗಿವೆ.