ಒಂದೇ ಕುಟುಂಬದ ಐವರು ಸಾವು
ಚೆನ್ನೈ: ಒಂದೇ ಕುಟುಂಬದ ಐವರು ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ತಮಿಳುನಾಡಿನ ಪುದುಕೊಟ್ಟೈನಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಂತಿತ್ತು. ಸಂಜೆಯಾದರೂ ಅದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶಿಲಿಸಿದಾಗ ಕಾರಿನೊಳಗೆ ಐವರು ಮೃತಪಟ್ಟಿರುವುದು ಕಂಡುಬಂದಿದೆ.
ಮೃತರನ್ನು ಉದ್ಯಮಿ ಮಣಿಕಂಠನ್ (50), ಅವರ ಪತ್ನಿ ನಿತ್ಯಾ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಮೃತರು ಸೇಲಂ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಕುಟುಂಬಸ್ಥರು ಸಾಲಗಾರರ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಅನುಮಾನ ವ್ಯಕ್ತಪಡಿಸಿದ್ದಾರೆ. ಮಣಿಕಂಠನ್ ಲೋಹದ ವ್ಯಾಪಾರ ಮಾಡುತ್ತಿದ್ದು, ಸಾಲ ಮಾಡಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುದುಕೊಟ್ಟೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
























