ಬಾಗಲಕೋಟೆ : ಕ್ಯಾಂಟರ್‌ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಅಪಘಾತ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಎಂಬ ನಾಲ್ವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಕಾರು ಮುದ್ದೇಬಿಹಾಳದ ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ತೆರಳಿತ್ತು. ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕ್ಯಾಂಟರ್‌ಗೆ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರಿನಲ್ಲಿದ್ದವರು ಹೊಸಪೇಟೆ ಬಳಿಯ ಹುಲಿಗೆಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ಮರಳುವಾಗ ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.