ಕಾರವಾರ: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯೊಬ್ಬರನ್ನು ಇಂದು ಬೆಳ್ಳಂಬೆಳಗ್ಗೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ. ಪುಣೆಯ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ವ್ಯಕ್ತಿ. ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ನಡೆದ ಘಟನೆ ನಡೆದಿದೆ.
ನಸುಕಿನ ಹೊತ್ತು ಹಂತಕರು ವಿನಾಯಕ ದಂಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿನಾಯಕ ನಾಯ್ಕ ಪತ್ನಿಯೊಂದಿಗೆ ಕಳೆದ ವಾರ ಗ್ರಾಮ ದೇವರ ಜಾತ್ರೆಗೆಂದು ಹಣಕೊಣ ಗ್ರಾಮಕ್ಕೆ ಬಂದಿದ್ದರು. ಭಾನುವಾರ ಬೆಳಗ್ಗೆ ಪುಣೆಗೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಅಷ್ಟರಲ್ಲೇ ಕೊಲೆ ನಡೆದಿರುವುದು ಅನುಮಾನ ಹುಟ್ಟಿಸಿದೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.