ಮಕ್ಕಳಿಗೆ ಅರಬ್ ಉಡುಪು ಹಾಕಿ ಕುಣಿಸಿದ್ದಕ್ಕೆ ಆಕ್ರೋಶ
ಕಾರ್ಕಳ : ತಾಲೂಕಿನ ಸಚ್ಚರಿಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಈದ್ ಮಿಲಾದ್ ಹಬ್ಬ ಆಚರಿಸಿದ ವಿಡಿಯೋ ವೈರಲ್ ಆದ ಬಳಿಕ ವಿವಾದ ಸೃಷ್ಟಿಯಾಗಿದೆ. ಸಚ್ಚರಿಪೇಟೆಯ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರವಾದಿ ಜನ್ಮದಿನಾಚರಣೆ ಪ್ರಯುಕ್ತ ಈದ್ ಮಿಲಾದ್ ಹಬ್ಬ ಆಚರಿಸಲಾಗಿತ್ತು. ಬಿಜೆಪಿ ಮುಖಂಡರೊಬ್ಬರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ಹಿಂದೂ ಮಕ್ಕಳ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಮಕ್ಕಳಿಗೆ ಅರಬ್ಬರಂತೆ ಪೋಷಾಕು ಹಾಕಿ ಕುಣಿಸಿದ ದೃಶ್ಯವಿದೆ. ಇದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನು ಅರಬ್ಸ್ಥಾನ ಅಂದುಕೊಂಡಿದ್ದಾರೆಯೇ? ಶಾಲೆಗಳಲ್ಲಿ ಈದ್ ಮಿಲಾದ್ ಆಚರಣೆ ಮಾಡಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಈದ್ ಮಿಲಾದ್ ಆಚರಣೆ ಮಾಡಿದ್ದಲ್ಲದೆ, ಅರಬ್ ರಾಷ್ಟ್ರದ ಉಡುಪು ಧರಿಸಿ ಕುಣಿಸಿದ್ದಾರೆ. ಹಿಂದೂ ಮಕ್ಕಳ ಮೇಲೆ ಪ್ರಭಾವ ಬೀರುವಂತೆ ಮಾಡಿದ್ದಾರೆ. ಕೂಡಲೇ ಉಡುಪಿ ಡಿಡಿಪಿಐ ಮಧ್ಯಪ್ರವೇಶಿಸಬೇಕು. ಶಾಲೆಯನ್ನು ಸೀಜ್ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.