ಬಂಟ್ವಾಳ: ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ ವೆಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಈದ್ ಮಿಲಾದ್ ಮೆರವಣಿಗೆ ವೇಳೆ ಬಿ.ಸಿ.ರೋಡಿಗೆ ಬನ್ನಿ ಎಂದು ಹೇಳಿದ ಬಳಿಕ ನಡೆದ ಬೆಳವಣಿಗೆಯಲ್ಲಿ ಹಿಂದು ಸಂಘಟನೆಗಳ ಅಧಿಕ ಮುಖಂಡರು ಸೋಮವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನ ಮುಂಭಾಗ ಜಮಾಯಿಸತೊಡಗಿದ್ದಾರೆ.
ಒಂದು ಬದಿಯಿಂದ ಹಿಂದು ಸಂಘಟನೆಗಳು ಜಮಾಯಿಸತೊಡಗುತ್ತಿದ್ದಂತೆ ಮತ್ತೊಂದು ಕಡೆಯಿಂದ ಪೊಲೀಸ್ ಪಡೆ ಬಂದು ನಿಂತಿದೆ.
ಈ ಸಂದರ್ಭ ಹಿಂದು ಸಂಘಟನೆ ಕಾರ್ಯಕರ್ತರು ಪೊಳಲಿ ದ್ವಾರದತ್ತ ಸಾಗದಂತೆ ಪೊಲೀಸ್ ತಡೆಯೊಡ್ಡಿದೆ. ಪೊಲೀಸ್ ಐಜಿ ಅಮಿತ್ ಸಿಂಗ್ ನೇತೃತ್ವದಲ್ಲಿ, ಎಸ್ಪಿ ಯತೀಶ್ ಎನ್., ಅಡಿಶನಲ್ ಎಸ್ಪಿ ರಾಜೇಂದ್ರ ಡಿ.ಎಸ್., ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಸದ್ಯ ಬಿಗುವಿನ ವಾತಾವರಣ ಇದೆ. ಅತ್ತ ಪರ್ಲಿಯಾ, ಶಾಂತಿಯಂಗಡಿಯಲ್ಲಿ ಈದ್ ಮೆರವಣಿಗೆ ಶಾಂತಿಯುತವಾಗಿ ನೆರವೇರಿದೆ.
























