ಮುಖ್ಯಮಂತ್ರಿಗೆ ಶಾಲು ಹೊದಿಸಲು ವೇದಿಕೆಗೆ ಜಿಗಿದ ಯುವಕ

ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಗಂಭೀರ ಭದ್ರತಾ ಲೋಪ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಸಂಭವಿಸಿದೆ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಕನೋರ್ವ ಆತಂಕ ಸೃಷ್ಟಿಸಿದ್ದಾನೆ. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದ ವೇದಿಕೆಗೆ ಕೇಸರಿ ಬಣ್ಣದ ಶಾಲು ಹಿಡಿದು ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯುವಕ ಯತ್ನಿಸಿದ್ದು ವೇದಿಕೆ ಮೇಲ್ಭಾಗಕ್ಕೆ ಜಿಗಿದಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಹಲವು ಗಣ್ಯರು ತಬ್ಬಿಬ್ಬಾಗಿದ್ದಾರೆ. ಸಿಎಂ ಅಂಗರಕ್ಷಕರು ಕೂಡಲೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದರೂ ಯುವಕ ಸಿಎಂ ಕಡೆ ಶಾಲು ಎಸೆದಿದ್ದಾನೆ.
ಮೆಟ್ಟಿಲುಗಳ ಮೇಲಿನಿಂದಾಗಿ ಯುವಕ ಸಿಎಂ ಕಡೆಗೆ ನುಗ್ಗಿದ್ದಾನೆ. ಈ ವೇಳೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಯುವಕನನ್ನು ಮಹದೇವ್ ನಾಯಕ್ ಎಂದು ಗುರುತಿಸಲಾಗಿದೆ. ಈ ಯುವಕ ಕಳೆದ ಒಂದು ವಾರದಿಂದ ಸಿಎಂ ಭೇಟಿಗೆ ಯತ್ನಿಸಿದ್ದ. ಭಾನುವಾರವೂ ಕಾರ್ಯಕ್ರಮದಲ್ಲಿ ಜನಜಂಗುಳಿ ಮಧ್ಯೆ ತೂರಿಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ. ಈತ ಸಿಎಂ ಮೇಲಿನ ಪ್ರೀತಿಯಿಂದ ಅವರಿಗೆ ಶಾಲು ಹೊದಿಸಲು ಬಂದಿದ್ದ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಬಂಧಿತ ಯುವಕ ಬೆಂಗಳೂರು ಬನಶಂಕರಿಯಲ್ಲಿ ವಾಸವಾಗಿದ್ದು, ಮೂಲತಃ ಉತ್ತರ ಕರ್ನಾಟಕದವನು ಎನ್ನಲಾಗಿದೆ. ಸದ್ಯ ವಿಧಾನಸೌಧ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಪರಿಷತ್ ಸಭಾಪತಿ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್, ಪರಿಷತ್ ಸದಸ್ಯ ಸಲೀಂ ಅಹಮದ್, ಯು.ಬಿ ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.





























Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top