ಪುತ್ತೂರು: 2025ರ ಸಪ್ಟೆಂಬರ್ ತಿಂಗಳಿನಲ್ಲಿ ಉಪ್ಪಿನಂಗಡಿ ಸಮೀಪದ ಕೊಯಿಲಾದಲ್ಲಿ ಪಶು ವೈಧ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಪಶು ಸಂಗೋಪನಾ ಇಲಾಖೆಯ ಪ್ರಮುಖರನ್ನು ಭೇಟಿಯಾದ ಶಾಸಕರು ಕೊಯಿಲಾ ಪಶು ವೈದ್ಯಕೀಯ ಕಾಲೇಜಿನ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಈಗಾಗಲೇ ಅಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು ಖಾಲಿ ಬಿದ್ದಿದೆ. ಇದೇ ಕಟ್ಟಡವನ್ನು ನವೀಕರಣ ಮಾಡಿ ಮೂಲ ಭೂತ ಸೌಕರ್ಯಗಳಿಗಾಗಿ ಸರಕಾರ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಬೇಕು ಮತ್ತು ಒಂದು ವರ್ಷದೊಳಗೆ ಕಾಲೇಜು ಪ್ರಾರಂಭವಾಗಬೇಕು ಎಂದು ಶಾಸಕರು ಮನವಿ ಮಾಡಿದ್ದರು. ಮನವಿಗೆ ಸ್ಪಂದನೆ ನೀಡಿದ ಪಶು ಸಂಗೋಪನಾ ಸಚಿವಾಲಯ ಈ ಬಗ್ಗೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದ್ದಾರೆ.
ಹಸು, ಹಂದಿ, ಕುರಿ ಸಾಕಾಣಿಕೆಗೆ ಅವಕಾಶ :
ಕೊಯಿಲಾದಲ್ಲಿರುವ ವಿಸ್ತಾರವಾದ ಜಾಗದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ಇರಬೇಕಾದ ಅಗತ್ಯ ಕ್ರಮಗಳನ್ನು ಮಾಡಿಕೊಳ್ಳುವುದರ ಜೊತೆ ಹೊರಗುತ್ತಿಗೆ ಆಧಾರದಲ್ಲಿ ಸ್ಥಳದಲ್ಲಿ ಹಸು, ಕುರಿ ಮತ್ತು ಹಂದಿ ಸಾಕಾಣಿಕೆಗೆ ಅವಕಾಶ ನೀಡುವಂತೆ ಶಾಸಕರು ಮನವಿ ಮಾಡಿದ್ದರು. ಈ ಮನವಿಗೆ ಇಲಾಖೆ ಸ್ಪಂದಿಸಿದ್ದು ಹೊರ ಗುತ್ತಿಗೆ ಆಧಾರದಲ್ಲಿ ಹಸು, ಕುರಿ ಮತ್ತು ಹಂದಿ ಸಾಕಾಣಿಕೆಗೆ ಅವಕಾಶವನ್ನು ಕಲ್ಪಿಸಿದೆ ಎಂದು ಶಾಸಕರು ತಿಳಿಸಿದ್ದಾರೆ.