5 ತಿಂಗಳ ಸೆರೆವಾಸd ಬಳಿಕ ಸಿಕ್ಕಿದ ರಿಲೀಫ್
ಹೊಸದಿಲ್ಲಿ : ಮದ್ಯನೀತಿ ಹಗರಣದಲ್ಲಿ ಕಳೆದ ಸುಮಾರು ಐದು ತಿಂಗಳಿಂದ ಜೈಲುಪಾಲಾಗಿದ್ದ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂಕೋರ್ಟ್ ಕೊನೆಗೂ ಜಾಮೀನು ಸಿಕ್ಕಿದೆ. 156 ದಿನಗಳ ನಂತರ ಸಿಎಂ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಈ ತೀರ್ಪು ನೀಡಿದೆ.
ಮದ್ಯ ನೀತಿ ಹಗರಣದಲ್ಲಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು..
ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. 10 ದಿನಗಳ ವಿಚಾರಣೆಯ ನಂತರ ಅವರನ್ನು ಏಪ್ರಿಲ್ 1ರಂದು ತಿಹಾರ್ ಜೈಲಿಗೆ ಕಳುಹಿಸಲಾಯಿತು. ಮೇ 10 ರಂದು ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕಾಗಿ 21 ದಿನಗಳ ಕಾಲ ಬಿಡುಗಡೆ ಮಾಡಲಾಗಿತ್ತು. ಜೈಲಿನಲ್ಲಿ ಕಳೆದ ಒಟ್ಟು ಸಮಯ 177 ದಿನಗಳು, ಅದರಲ್ಲಿ 21 ದಿನಗಳನ್ನು ಕಳೆದರೆ ಕೇಜ್ರಿವಾಲ್ ಒಟ್ಟು 156 ದಿನಗಳ ಕಾಲ ಜೈಲಿನಲ್ಲಿದ್ದರು.
ಈಗ ರದ್ದಾಗಿರುವ ಅಬಕಾರಿ ನೀತಿ 2021-22ರಲ್ಲಿನ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಅವರನ್ನು ಮಾರ್ಚ್ 21ರಂದು ಇ.ಡಿ. ಬಂಧಿಸಿತ್ತು. ಜೂನ್ 26ರಂದು ಅಬಕಾರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾಗ ಸಿಬಿಐ ಅವರನ್ನು ಬಂಧಿಸಿತ್ತು.
ಅಬಕಾರಿ ನೀತಿಯನ್ನು ಅಂತಿಮಗೊಳಿಸಲು ಕೇಜ್ರಿವಾಲ್ ನೇತೃತ್ವದ ಎಎಪಿ 100 ಕೋಟಿ ಕಿಕ್ಬ್ಯಾಕ್ ಪಡೆದಿದೆ. ಈ ಹಣದ ದೊಡ್ಡ ಭಾಗವನ್ನು ಪಕ್ಷವು ತನ್ನ ಗೋವಾ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.