ಜೂನ್‌ ತಿಂಗಳ ಗೃಹಲಕ್ಷ್ಮೀ ಹಣ ಕೊನೆಗೂ ಖಾತೆಗೆ ಜಮೆ | ಜುಲೈ, ಆಗಸ್ಟ್‌ ತಿಂಗಳ ಕಂತು ಇನ್ನಷ್ಟು ವಿಳಂಬ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಕಂತಿನ ಹಣ ಇಂದು ಮಹಿಳೆಯರ ಖಾತೆಗಳಿಗೆ ಕೊನೆಗೂ ವರ್ಗಾವಣೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗದ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಟೀಕಿಸಿದ್ದವು. ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಸ್ವಲ್ಪ ವಿಳಂಬವಾಗುತ್ತಿದೆ. ಖಂಡಿತವಾಗಿ ಸರ್ಕಾರ 2000 ರೂ. ವರ್ಗಾವಣೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು, ಇವತ್ತು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಶುರುವಾಗಿದೆ.
ಮೂರು ತಿಂಗಳ‌ ಬಳಿಕ‌ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆ ಸೇರಿದೆ. ಆದರೆ, ಬಾಕಿ ಇರುವ ಇನ್ನೆರಡು ತಿಂಗಳ‌ ಹಣ ಖಾತೆ ಸೇರುವುದು ವಿಳಂಬವಾಗಲಿದೆ. ಜುಲೈ, ಆಗಸ್ಟ್ ತಿಂಗಳ ಹಣ ಖಾತೆಗಳಿಗೆ ವರ್ಗಾವಣೆಯಾಗುವುದು ಬಾಕಿ ಉಳಿದಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸದ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಜುಲೈ ತಿಂಗಳ ಹಣಕ್ಕೆ ಪತ್ರ ಬರೆಯಲಾಗಿದೆ. ಇನ್ನೂ ಹಣ ಬಿಡುಗಡೆ ಮಾಡಿಲ್ಲ.‌ ಹೀಗಾಗಿ ಜುಲೈ ತಿಂಗಳ ಹಣ ಬರುವುದು ತಡವಾಗಲಿದೆ. ಸರ್ಕಾರ ನಮಗೆ ಬೇಗ ಕೊಟ್ಟರೆ ನಾವು ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆ. ಆದರೆ, ಸರ್ಕಾರದಿಂದ ಹಣ ಬಿಡುಗಡೆ ಮಾಡುವುದು ತಡವಾಗುತ್ತಿದೆ ಎಂದಿದ್ದಾರೆ.

ಜೂನ್ ತಿಂಗಳಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳ‌ ಪೋರ್ಟಲ್​ನಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬಂದಿದ್ದವು. ಅವುಗಳನ್ನು ಸರಿಪಡಿಸಿ ಈಗ ಖಾತೆಗೆ ಹಣ ಹಾಕಲಾಗುತ್ತಿದೆ. ಜೂನ್ ತಿಂಗಳ ಕಂತು 80,000 ಜನರಿಗೆ ಜಮೆಯಾಗಿರಲಿಲ್ಲ. ಅದು ಈಗ ವರ್ಗಾವಣೆಯಾಗಿದೆ. ಎಸ್ಸಿ, ಎಸ್ಟಿ ಪೋರ್ಟಲ್ ಬೇರೆ, ಹೀಗಾಗಿ ಅವರಿಗೆ ತೊಂದರೆ ಆಗಿತ್ತು. ಸರ್ಕಾರಕ್ಕೆ ದುಡ್ಡಿನ ಸಮಸ್ಯೆ ಇಲ್ಲ. ವಿರೋಧ ಪಕ್ಷಗಳು ವೃಥಾ ಆರೋಪ ಮಾಡುತ್ತಿವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top