ಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಮಧ್ಯಾಹ್ನ ಕಾಸರಗೋಡು ಮನೆಗೆ ತೆರಳಿದ ಧರ್ಮಸ್ಥಳ ಪೊಲೀಸರ ತಂಡ ಕೊಲೆಗೆ ಬಳಸಿದ ಬೈಕ್, ಕತ್ತಿ, ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ಅವರನ್ನು ಕೊಲೆ ಮಾಡಿದ ಆರೋಪಿಗಳಾದ ಕಾಸರಗೋಡು ತಾಲೂಕಿನ ಕುಂಬ್ರಾಜಿ ಗ್ರಾಮದ ಒಡಬ್ಬಳ ನಿವಾಸಿಯಾಗಿರುವ ಆಳಿಯ ರಾಘವೇಂದ್ರ ಕೆದಿ ಲಾಯ ( 53) ಹಾಗೂ ಮೊಮ್ಮಗ ಮುರಳಿಕೃಷ್ಣ (21) ಕೊಲೆ ಆರೋಪಿಯಾಗಿದ್ದಾರೆ.
ಅವರನ್ನು ಸ್ಥಳ ಮಹಜರು ನಡೆಸಲು ಆರೋಪಿಗಳ ಕಾಸರಗೋಡು ಮನೆಗೆ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ್ ಆರ್ ಗಾಣೇರ ಹಾಗೂ ಸಿಬ್ಬಂದಿ ತಂಡದವರು ಹೋಗಿದ್ದು ಈ ವೇಳೆ ಕೊಲೆಗೆ ಬಳಸಿದ ಹೀರೋ ಕಂಪನಿಯ ಒಂದು ಬೈಕ್, ಒಂದು ಕತ್ತಿ, ಇಬ್ಬರು ಆರೋಪಿಗಳ ಬಟ್ಟೆಯನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
























