ಬೆಂಗಳೂರು: ಬಿಬಿಎಂಪಿ ಲಾರಿಯಡಿಗೆ ಸಿಲುಕಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಕೆ.ಆರ್.ಸರ್ಕಲ್ ಬಳಿ ನಡೆದಿದೆ.
ಮದುವೆ ನಿಶ್ಚಯವಾಗಿದ್ದ ಯುವತಿ ಶಿಲ್ಪಾ ಹಾಗೂ ಪ್ರಶಾಂತ್ ಮೃತಪಟ್ಟವರು.
ನಿನ್ನೆ ರಾತ್ರಿ ಪ್ರಶಾಂತ್ (25) ಮತ್ತು ಶಿಲ್ಪ (25) ಬೈಕ್ನಲ್ಲಿ ಚಲಿಸುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್ನಲ್ಲಿ ಕೆಲಸ ಮಾಡುತ್ತಿದ್ದರು.
ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸ ಮಾಡಿಕೊಂಡಿದ್ದಳು. ಈಕೆ ತಂದೆ ವೆಂಕಟರಾಮ ರೆಡ್ಡಿ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ವೆಂಕಟರಾಮ ರೆಡ್ಡಿಗೆ ಒಟ್ಟು ಮೂವರು ಹೆಣ್ಣು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳು. ಆಕೆಯ ಮದುವೆ ತಯಾರಿ ಕೂಡ ನಡೀತಿತ್ತು. ಆದರೆ ಅಷ್ಟರಲ್ಲಿ ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾಳೆ.
ತಂದೆ ವೆಂಕಟರಾಮ ರೆಡ್ಡಿ ಮಗಳ ಮದುವೆಗೆ ಚಿನ್ನವನ್ನು ಮಾಡಿಸಿಟ್ಟಿದ್ದರು. ಭಾನುವಾರ ಬೆಳಗ್ಗೆ ಕೂಡ ಮದುವೆ ಮಾತುಕತೆ ಪ್ರಸ್ತಾಪ ಆಗಿತ್ತು. ಆದರೆ ನಿನ್ನೆ ಸಂಜೆ ಹೊತ್ತಿಗೆ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ಶಿಲ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.