ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದ ಘಟನೆ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ.
ಗುಂಡಿನ ದಾಳಿಯಿಂದಾಗಿ ಟ್ರಂಪ್ ಬಲ ಕಿವಿಗೆ ಗಾಯವಾಗಿದೆ.
ಟ್ರಂಪ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಶೂಟರ್ ಸೇರಿದಂತೆ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಗುಂಡಿನ ದಾಳಿಯ ಬಳಿಕ ಟ್ರಂಪ್ ಮುಖ ರಕ್ತಸಿಕ್ತವಾಗಿತ್ತು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಟ್ರಂಪ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಗುಂಡಿನ ಸದ್ದು ಕೇಳಿಸಿದೆ. ಸ್ಫೋಟದ ಸದ್ದಿಗೆ ಟ್ರಂಪ್ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಅವರನ್ನು ತಕ್ಷಣವೇ ವೇದಿಕೆಯಿಂದ ಕೆಳಗಿಳಿಸಿದರು. ಈ ವೇಳೆ ಟ್ರಂಪ್ ಮುಖ ಹಾಗೂ ಕಿವಿಯಲ್ಲಿ ರಕ್ತ ಕಾಣಿಸಿಕೊಂಡಿದೆ.
ಗುಂಡು ಹಾರಿಸಿದ ಆರೋಪಿಯನ್ನು ಸಾಯಿಸಲಾಗಿದೆ ಎಂದು ಬಟ್ಲರ್ ಕೌಂಟಿ ಜಿಲ್ಲಾ ಅಟಾರ್ನಿ ರಿಚರ್ಡ್ ಗೋಲ್ಡಿಂಗರ್ ಹೇಳಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ರ್ಯಾಲಿಯಲ್ಲಿನ ಅಪಘಾತದ ನಂತರ ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ ಮತ್ತು ಅವರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಗುಂಡಿನ ದಾಳಿಯು ಟ್ರಂಪ್‌ರನ್ನು ಹತ್ಯೆ ಮಾಡುವ ಪ್ರಯತ್ನವಾಗಿರಬಹುದು ಎಂದು ಅಂದಾಜಿಸಲಾಗಿದೆ. 1981ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಮೆರಿಕ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಇದು ಮೊದಲ ಹತ್ಯೆಯ ಪ್ರಯತ್ನವಾಗಿದೆ. ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಸೋಮವಾರ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಸನ್ ಪ್ರಾರಂಭವಾಗುವ ಮೊದಲು ತಮ್ಮ ಕೊನೆಯ ರ್ಯಾಲಿ ನಡೆಸುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿಯಾಗಿದೆ.