ಸುಳ್ಯ: ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರಿನಿಂದ ವರದಿಯಾಗಿದೆ.
ಅಶ್ವಿನಿ ಕೆ ವಿ (25) ಪತಿಯಿಂದ ಚೂರಿ ಇರಿತಕ್ಕೊಳಗಾದವರು ಎಂದು ಗುರುತಿಸಲಾಗಿದೆ.
ಆರೋಪಿ ಪತಿ ನವೀನ್ ಕುಮಾರ್ ಮತ್ತು ಅಶ್ವಿನಿ ಅವರು 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಆ ಬಳಿಕ ಆತ ವಿನಃ ಕಾರಣ ಕಿರುಕುಳ ನೀಡುತ್ತಾ ಬಂದಿದ್ದು, ಪತ್ನಿ ಅಶ್ವಿನಿ ಕಳೆದ 4 ವರ್ಷಗಳಿಂದ ತನ್ನ ತವರು ಮನೆಯಾದ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ವಿನೋಭನಗರ ಎಂಬಲ್ಲಿ ವಾಸವಾಗಿದ್ದಾರೆ. ಅಲ್ಲಿಗೂ ಬರುತ್ತಿದ್ದ ಪತಿ ನವೀನ್ ಕುಮಾರ್ ವಿನಾಃ ಕಾರಣ ಪತ್ನಿಗೆ ಬಯ್ಯುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿ ಪತ್ನಿ ಅಶ್ವಿನಿ ಅವರು ಪಕ್ಕದ ಮನೆಗೆ ಹೋದಾಗ ಅಲ್ಲಿಗೆ ಬಂದ ಆರೋಪಿ ಪತಿ ಆತನಲ್ಲಿದ್ದ ಚೂರಿಯಿಂದ ಪತ್ನಿಗೆ ಹಲ್ಲೆ ನಡೆಸಿದ್ದಾನೆ. ಇರಿತದಿಂದ ಗಾಯಗೊಂಡ ಪತ್ನಿ ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಆರೋಪಿ ಪತಿ ಚೂರಿಯನ್ನು ಸ್ಥಳದಲ್ಲಿ ಬಿಸಾಡಿ ಪರಾರಿಯಾಗಿದ್ದ. ಗಾಯಾಳು ಅಶ್ವಿನಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.