ಉಡುಪಿ: ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ರಿಡ್ಜ್ ಕಾರು ಬೆಂಕಿಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ.
ಕಾರು ಚಾಲಕ ಸೇರಿ ಇನ್ನೋರ್ವ ವ್ಯಕ್ತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅದರೊಳಗೆ ಮಲಗಿದ್ದರು. ಈ ವೇಳೆ ಕಾರು ಚಾಲಕನಿಗೆ ಕಾರಿನ ಬಾನೆಟ್ ಬಳಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಹೊರಬಂದಿದ್ದಾರೆ.
ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಮಾಲೀಕನ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಹಿಮ್ಮುಖವಾಗಿ ಚಲಿಸಲಾರಂಭಿಸಿದ ಕಾರು ಗಾಳಿಮಳೆಗೆ ಮುರಿದು ಬಿದ್ದಿದ್ದ ಮರದ ಗೆಲ್ಲೊಂದು ಅಡ್ಡ ಸಿಕ್ಕಿದ ಕಾರಣ ನಿಂತಿದೆ. ಇಲ್ಲದಿದ್ದರೆ ಚಲಿಸಿಕೊಂಡು ಇನ್ನಷ್ಟು ದೂರ ಹೋಗುವ ಸಾಧ್ಯತೆಯಿತ್ತು.