ಮಂಗಳೂರು: ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಫಾರ್ಮ್ ಹೌಸ್ ಗೆ 9 ಮಂದಿಯ ದರೋಡೆಕೋರರ ತಂಡ ನುಗ್ಗಿ ದರೋಡೆಗೈದ ಘಟನೆ ಮಂಗಳೂರು ಹೊರವಲಯದ ಉಳಾಯಿಬೆಟ್ಟು ಎಂಬಲ್ಲಿ ನಡೆದಿದೆ.
ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಗೆ ದರೋಡೆಕೋರರ ತಂಡ ನುಗ್ಗಿದ್ದು, ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ 8-9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ತಂಡದ ಸದಸ್ಯರು ಚೂರಿ ತೋರಿಸಿ ಮನೆಯವರನ್ನು ಹೆದರಿಸಿದ್ದಾರೆ. ಅಲ್ಲದೆ ಪದ್ಮನಾಭ ಕೋಟ್ಯಾನ್ ಮತ್ತವರ ಕುಟುಂಬದ ಸದಸ್ಯರನ್ನು ಬೆಡ್ಶೀಟ್ ನಿಂದ ಕಟ್ಟಿ ಹಾಕಿದ್ದರು. ಈ ಸಂದರ್ಭ ಪದ್ಮನಾಭ ಕೋಟ್ಯಾನ್ ಅವರ ಕೈಗೆ ಗಾಯವಾಗಿದೆ. ದರೋಡೆಕೋರರು ಮನೆಯನ್ನು ಜಾಲಾಡಿ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಮನೆಯ ಅಂಗಳದಲ್ಲಿದ್ದ ವಾಹನವನ್ನು ಸ್ವಲ್ಪ ದೂರ ಕೊಂಡೊಯ್ದು ಬಳಿಕ ಅಲ್ಲೇ ಅದನ್ನು ಬಿಟ್ಟು ಪರಾರಿಯಾಗಿದ್ದಾರೆ.
ದರೋಡೆಕೋರರ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.