ನೀಟ್ ಹಗರಣ ವಿದ್ಯಾರ್ಥಿಗಳ ಪಾಲಿಗೆ ಬಹು ದೊಡ್ಡ ದುರಂತವಾಗಿದೆ : ಅಶೋಕ್ ಕುಮಾರ್ ರೈ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕರಿಂದ ಗೌರವ ಸನ್ಮಾನ

ಪುತ್ತೂರು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹೆಜ್ಜೆ ಇಡುವಲ್ಲಿ ನಡೆಯುವ ನೀಟ್ ಪರೀಕ್ಷೆಯಲ್ಲೇ ಹಗರಣ ನಡೆದಿದೆ ಎಂದಾದರೆ ಇದು ವಿದ್ಯಾರ್ಥಿ ಹಾಗೂ ಪೋಷಕರ ಪಾಲಿಗೆ ಬಹು ದೊಡ್ಡ ದುರಂತವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ನೀಟ್, ಕೆಸಿಇಟಿ ಮತ್ತು ಜೆಇಇ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಕಚೇರಿಯಲ್ಲಿ ಸೋಮವಾರ ಗೌರವಿಸಿ, ಸನ್ಮಾನಿಸಿ ಮಾತನಾಡಿದರು.

ನಮ್ಮ ಕ್ಷೇತ್ರದಲ್ಲಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವು ಖಂಡಿತವಾಗಿಯೂ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ನಮ್ಮ ಅನೇಕ ವಿದ್ಯಾರ್ಥಿಗಳು ನೀಟ್ ನಲ್ಲಿಯೂ ಉತ್ತಮ ಪಲಿತಾಂಶವನ್ನು ಪಡೆದಿದ್ದಾರೆ. ನೀಟ್ ನಲ್ಲಿ ದೇಶದಲ್ಲಿ ದೊಡ್ಡ ಹಗರಣವೇ ನಡೆದಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೆಂದರೆ ನಮ್ಮ ದೇಶದ ಒಂದು ಭೃಷ್ಟತೆಗೆ ಸಾಕ್ಷಿಯಾಗಿದೆ. ಕಷ್ಟಪಟ್ಟು ಓದಿದ ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಿದ್ದು, ಕಲಿಕೆಯಲ್ಲಿ ಏನೂ ಇಲ್ಲದ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವ ಮೂಲಕ ನೀಟ್ ವ್ಯವಸ್ಥೆ ಬಡಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಪ್ರಹಾರ ನಡೆಸಿದೆ ಎಂದು ಹೇಳಿದರು.







































 
 

ಟ್ರಸ್ಟ್ ನ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಕಣ್ಣಿಗೆ ಕಾಣುವ ಅಭಿವೃದ್ದಿಗಳು ಬೇರೆಯೇ ಇರುತ್ತದೆ, ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಕಣ್ಣಿಗೆ ಕಾಣಿಸಿದ ಅನೇಕ ಅಭಿವೃದ್ದಿ ಕೆಲಸಗಳನ್ನು ಶಾಸಕರು ಸದಾ ಮಾಡುತ್ತಿದ್ದಾರೆ ಎಂದರು.

ಟ್ರಸ್ಟ್ ನ ಪ್ರಮುಖ ನಿಹಾಲ್ ಪಿ ಶೆಟ್ಟಿ ಮಾತನಾಡಿ, ಯುವಕರನ್ನು ವಿಷ ಬೀಜ ಬಿತ್ತುವ ಕೆಲಸಕ್ಕೆ ಬಳಕೆ ಮಾಡುವ ಬದಲು ಅವರಿಗೆ ವಿದ್ಯೆ ಮತ್ತು ಉದ್ಯೋಗವನ್ನು ಕೊಡಿಸುವ ಕೆಲಸವನ್ನು ನಾವು ಪ್ರತೀಯೊಬ್ಬರೂ ಮಾಡಬೇಕು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಮುರಳೀಧರ್ ರೈ ಮಟಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಪಂಜಿಗುಡ್ಡೆ ಈಶ್ವರಭಟ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಟ್ರಸ್ಟ್ ಪ್ರಮುಖ ಯೋಗಿಶ್ ಸಾಮಾನಿ ವಂದಿಸಿದರು. ಸಿಬ್ಬಂದಿಗಳಾದ ಲಿಂಗಪ್ಪ, ರಚನಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top