ಪುತ್ತೂರು: ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಯ ಇಂಧನ ಎಂದು ಪರಿಗಣಿಸಲಾಗುತ್ತದೆ. ಗಣಕ ವಿಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿ, ಹೊಸ ಉದ್ಯಮಗಳನ್ನು ಸೃಷ್ಟಿಸಿ ದೇಶದ ಆರ್ಥಿಕ ವಿಕಾಸಕ್ಕೆ ಕಾರಣವಾಗಬೇಕು ಎಂದು ಧಾರವಾಡ ನ್ಯಾಷನಲ್ ಫೋರೆನ್ಸಿಕ್ ಸೈನ್ಸ್ ಯುನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ, ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಕೌಶಿಕ್ ಜಿ. ಎನ್. ಅಭಿಪ್ರಾಯಪಟ್ಟರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಗಣಕ ವಿಜ್ಞಾನ ವಿಭಾಗ, ಐಟಿ ಕ್ಲಬ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾದ ಟೆಕ್ನೋ ಫ್ಯೂಷನ್ -2024 ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೆಂಗಳೂರು ಕಾಗ್ನಿಝೆಂಟ್ ನ ಟೆಕ್ ಲೀಡ್ ಶ್ರೇಯಾ ಎಸ್. ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ಗುರುತಿಸಿಕೊಳ್ಳಬೇಕು. ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ ಸ್ಪರ್ಧಾತ್ಮಕ ಯುಗದಲ್ಲಿರುವ ವಿಪುಲ ಅವಕಾಶಗಳನ್ನು ಬಳಸಿಕೊಂಡರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ ವಿ.ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಶುಭಾಶಂಸನೆಗೈದರು. ವೇದಿಕೆಯಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಕನ್ವೀನರ್ ಹೇಮಾ ಸುಭಾಶಿನಿ, ಐಟಿ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ತೃಪ್ತಿ ಉಪಸ್ಥಿತರಿದ್ದರು. ಹೇಮಾ ಸುಭಾಶಿನಿ ಸ್ವಾಗತಿಸಿ, ತೃಪ್ತಿ ವಂದಿಸಿದರು. ಭೂಮಿಕಾ ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ :
ಟೆಕ್ನೋ ಫ್ಯೂಷನ್ 2024 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ, ಸರ್ವಜ್ಞ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ಶ್ರೀನಿಧಿ ರವಿಶಂಕರ್ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದೆ. ಈ ಡಿಜಿಟಲ್ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಪ್ರವೇಶಿಸಲು ಅಗತ್ಯವಾದ ಮೂಲಭೂತ ಕೌಶಲ್ಯಗಳನ್ನು ತಂತ್ರಜ್ಞಾನದಿಂದಲೇ ಕಲಿಯಬಹುದು ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವಿಶೇಷಾಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಶ್ರೀಧರ್ ನಾಯ್ಕ್, ಪ್ರಾಂಶುಪಾಲ ಪ್ರೊ ವಿ.ಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ ಶಿವಪ್ರಸಾದ್ ಕೆ. ಎಸ್., ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಕನ್ವೀನರ್ ಹೇಮಾಸುಭಾಶಿನಿ, ಐಟಿ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ತೃಪ್ತಿ ಉಪಸ್ಥಿತರಿದ್ದರು.
ಉಪನ್ಯಾಸಕ ಅರವಿಂದ ಶರ್ಮ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ಭಕ್ತಿಶ್ರೀ ಶರ್ಮ ಕಾರ್ಯಕ್ರಮ ನಿರೂಪಿಸಿದರು.