ಹೊಸದಿಲ್ಲಿ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರನ್ನು ಬಾಂಗ್ಲಾದೇಶದಲ್ಲಿ ಬರ್ಬರವಾಗಿ ಕೊಲೆ ಮಾಡಿದ ವಿಚಾರ ತನಿಖೆಯಿಂದ ಬಯಲಾಗಿದ್ದು, ಹತ್ಯೆಯ ಪ್ರಮುಖ ಆರೋಪಿ ಬಾಂಗ್ಲಾ ದೇಶದ ಅಕ್ರಮ ವಲಸಿಗ ಜಿಹಾದ್ ಹವಾಲ್ದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಕತ್ತು ಹಿಸುಕಿ, ಚರ್ಮ ಸುಲಿದು ಕತ್ತರಿಸಿ ಹಾಕಲಾಗಿತ್ತು.
ಸಿಐಡಿ ಮೂಲಗಳ ಪ್ರಕಾರ, ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಫ್ಲಾಟ್‌ನಲ್ಲಿ ಕೊಲೆ ಮಾಡಿ ಸಂಸದರ ದೇಹವನ್ನು ತುಂಡು ತುಂಡಾಗಿಸಿ ವಿಕೃತಿ ಮೆರೆದಿರುವ ಬಗ್ಗೆ ಜಿಹಾದ್ ಹವಾಲ್ದಾರ್ ಒಪ್ಪಿಕೊಂಡಿದ್ದಾನೆ. ಈ ಕೃತ್ಯದ ಕುರಿತು ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾನೆ. ಜೊತೆಗೆ ಈ ಹೇಯ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಬಾಂಗ್ಲಾದೇಶ ಮೂಲದ ಅಮೆರಿಕ ಪ್ರಜೆ ಅರುಝಾಮಾನ್ ಎಂದು ಹವಾಲ್ದಾರ್ ಬಾಯ್ಬಿಟ್ಟಿದ್ದಾನೆ. ಅರುಜ್ಜಮಾನ್ ಆದೇಶದ ಮೇರೆಗೆ, ಹವಾಲ್ದಾರ್ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಸೇರಿ ನ್ಯೂಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಹವಾಲ್ದಾರ್ ತಿಳಿಸಿದ್ದಾನೆ.
ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿ, ನ್ಯೂಟೌನ್ ಫ್ಲಾಟ್‌ನಲ್ಲಿ ರಕ್ತದ ಕಲೆಗಳನ್ನು ಪತ್ತೆಹಚ್ಚಿದೆ. ದೇಹದ ಭಾಗಗಳನ್ನು ಎಸೆಯಲು ಬಳಸಿರುವ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ವಶಪಡಿಸಿಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಂಸದರನ್ನು ಮೊದಲು ಕತ್ತು ಹಿಸುಕಿ ಕೊಂದು ನಂತರ ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಹತ್ಯೆ ಕುರಿತು ಯಾವುದೇ ಕುರುಹು ಸಿಗದಂತೆ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.