ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಹರೀಶ್ ಪೂಂಜಾರಿಗೆ ಜಾಮೀನು ದೊರೆತಿದೆ.
ಪೂಂಜಾ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲು ಬುಧವಾರ ಬೆಳ್ತಂಗಡಿ ಠಾಣಾ ಪೊಲೀಸರು ಪೂಂಜಾರವರ ಮನೆಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ಪೊಲೀಸರಲ್ಲಿ ವಿನಂತಿಸಿಕೊಂಡಿದ್ದಾರೆ.
ಸಂಜೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಹಾಗೂ ತನಿಖಾಧಿಕಾರಿಯಾದ ಬಿ. ಜಿ. ಸುಬ್ಬಾಪೂರ ಮರ್ ಅವರು ವಿಚಾರಣೆಗೆ ಹಾಜರಾಗುವಂತೆ ಹರೀಶ್ ಪೂಂಜರಿಗೆ ನೋಟಿಸ್ ನೀಡಿ ತೆರಳಿದರು. ನೋಟಿಸ್ ನೀಡಿದ ಹಿನ್ನೆಲೆ ಶಾಸಕ ಹರೀಶ್ ಪೂಂಜ ರವರು ಬಿಜೆಪಿಯ ಘಟಾನುಘಟಿಗಳ ಜೊತೆಗೆ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಬೆಳ್ತಂಗಡಿ ಠಾಣಾ 58/2024, ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.