ಪುತ್ತೂರು: ಮರಳುಗಾರಿಕೆ ವಿಚಾರದಲ್ಲಿ ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡುತ್ತಿರುವುದನ್ನು ಸಂಘ ಖಂಡಿಸಿದ್ದು, ಈ ಕುರಿತು ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದು ಮರಳು ವ್ಯಾಪಾರಸ್ಥರ ಸಂಘ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘ, ಕುದ್ಮಾರು ಗ್ರಾಮದ ನೂಜಿ ಎಂಬಲ್ಲಿ ಇತ್ತೀಚೆಗೆ ಚೆನ್ನಪ್ಪ ಗೌಡ, ಅಶೋಕ ಹಾಗೂ ಇತರರಿಗೆ ಸಂಬಂಧಿಸಿದಂತೆ ತಮ್ಮ ವರ್ಗ ಜಮೀನಿನಲ್ಲಿ ಪರವಾನಿಗೆ ಪಡೆದು, ಸರಕಾರಕ್ಕೆ ರಾಜಸ್ವ ಕಟ್ಟಿ ಮರಳು ದಾಸ್ತಾನಿರಿಸಿದ್ದಾರೆ. ಆದರೆ ಬೆಳ್ಳಾರೆ ಠಾಣಾ ಪೊಲೀಸರು ಯಾರದೋ ವ್ಯಕ್ತಿಗಳ ಒತ್ತಡಕ್ಕೆ ಮಣಿದು ದಾಸ್ತಾನಿರಿಸಿದ್ದ ಸ್ಥಳಕ್ಕೆ ದಾಳಿ ಮಾಡಿ ಕೆಲವು ವಾಹನ ಹಾಗೂ ಮರಳನ್ನು ವಶಪಡಿಸಿಕೊಂಡಿರುವುದು ಕಂಡು ಬಂದಿದೆ. ಅಲ್ಲದೆ ಈ ಪ್ರಕರಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ಅವರನ್ನು ಸಿಲುಕಿಸುವ ಉದ್ದೇಶದಿಂದ ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿ ಹಾಕಿರುವುದು ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.
ದಾಸ್ತಾನಿರಿಸಿದ್ದ ಮರಳನ್ನು ಸ್ಥಳೀಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಪರವಾನಿಗೆ ಪಡೆದುಕೊಂಡು ಹೋಗುತ್ತಿರುವುದನ್ನು ಮರೆಮಾಚಿ ಸುಳ್ಳು ಕೇಸ್ ದಾಖಲು ಮಾಡಿರುವುದು ಕಂಡು ಬಂದಿದೆ.
ಆದ್ದರಿಂದ ಈ ಮರಳುಗಾರಿಕೆಗೂ ದಿನೇಶ್ ಮೆದು ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.