ಮಂಗಳೂರು: ಚಿಪ್ಪು ಹೆಕ್ಕಲು ಹೋದ ಯುವಕರ ತಂಡದ ಓರ್ವ ನೀರು ಪಾಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್ (24) ನೀರು ಪಾಲಾದವರು.
ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು, ಈ ಸಂದರ್ಭ ಯುವಕ ನೀರು ಪಾಲಾಗಿದ್ದಾರೆ. ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ ಚಿಪ್ಪು ಹೆಕ್ಕಲು ಬಂದಿದ್ದರು. ಶಾಂಭವಿ ನದಿಯಲ್ಲಿ ನೀರಿನ ಇಳಿತವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಷ್ ಮುಂದಾಗಿದ್ದು ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್ ರನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಷ್ ಪತ್ತೆಯಾಗಿಲ್ಲ.
ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ, ಕರಾವಳಿ ಕಾವಲು ಪಡೆಯ ಹೆಜ್ಜಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.