ಕೊಡಗು: ಜಿಲ್ಲೆಯ ಸೂರ್ಲಬ್ಬಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಬಳಿಕ ವಿದ್ಯಾರ್ಥಿನಿಯ ರುಂಡ ಪತ್ತೆಯಾಗಿದೆ.
ನಿಶ್ಚಿತಾರ್ಥ ನಿಲ್ಲಿಸಿದ್ದಕ್ಕೆ ಆರೋಪಿ ಪ್ರಕಾಶ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೀನಾಳ ರುಂಡ ಕತ್ತರಿಸಿ ಹತ್ಯೆಗೈದು ಪರಾರಿಯಾಗಿದ್ದ.
ಬಳಿಕ ಹಮ್ಮಿಯಾಲ ಗ್ರಾಮದ ಗುಡ್ಡಪ್ರದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿ ಪ್ರಕಾಶ್ ನನ್ನು ಇಂದು ಪೊಲೀಸರು ಬಂಧಿಸಿದ್ದು, ಮೃತ ಮೀನಾಳ ರುಂಡವನ್ನು ಸೂರ್ಲಬ್ಬಿಯ ಬೆಟ್ಟ ಪ್ರದೇಶದಲ್ಲಿ ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದ. ಇದೀಗ ಹತ್ಯೆಯಾದ ಪ್ರದೇಶದಿಂದ 300 ಮೀ. ದೂರದಲ್ಲಿ ರುಂಡ ಪತ್ತೆಯಾಗಿದೆ.
ಮೇ 9ರಂದು ಮೀನಾಳ ಜೊತೆ ಪ್ರಕಾಶ್ ನಿಶ್ಚಿತಾರ್ಥವಿತ್ತು. ಆದರೆ ಅಪ್ರಾಪ್ತ ಬಾಲಕಿ ಜೊತೆ ನಿಶ್ಚಿತಾರ್ಥ ವಿಷಯ ತಿಳಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಾಲಕಿಗೆ 18 ವರ್ಷವಾಗುವವರೆಗೆ ಮದುವೆ ಮಾಡುವಂತಿಲ್ಲ ಎಂದು ತಿಳಿಸಿದ್ದರು. ಇದೇ ಕಾರಣಕ್ಕೆ ಪ್ರಕಾಶ್, ಮೀನಾಳನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆಯಿಂದಷ್ಟೇ ಸತ್ಯ ತಿಳಿದು ಬರಬೇಕಿದೆ.