ಪುತ್ತೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಯೋಗ ಶಿಬಿರ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕ ವಸಂತ ಸುವರ್ಣ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗವು ಮನುಷ್ಯ ಹಾಗೂ ಪ್ರಕೃತಿಯನ್ನು ಸೇರಿಸುವ, ಒಂದಾಗಿಸುವ ಒಂದು ಸಾಧನ. ಭೌತಿಕದಿಂದ ಅಭೌತಿಕದೆಡೆಗೆ ನಡೆಸುವ ಪಯಣಕ್ಕೆ ಈ ಯೋಗವೇ ಮಾರ್ಗದರ್ಶಕ. ಯೋಗವನ್ನು ಅಭ್ಯಾಸ ಮಾಡಿದರೆ ದೇಹದ ಜಡತ್ವವು ನಿವಾರಣೆಯಾಗಿ ಸೂಕ್ಷ್ಮ ಹಾಗೂ ಕ್ರಿಯಾಶೀಲವಾದ ಮನಸ್ಸಿನೊಡನೆ ಸ್ಪಂದಿಸಲು ಸಿದ್ಧಗೊಳ್ಳುತ್ತದೆ. ಆನಂತರ ಈ ದೇಹ ಮನಸ್ಸುಗಳೆರಡೂ ಸ್ವಯಂಪ್ರಕಾಶನಾದ ಆತ್ಮನೊಡನೆ ವಿಹರಿಸಲು ಅನುವಾಗುತ್ತವೆ. ಧ್ಯಾನದ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ಅಣಿಗೊಳಿಸುತ್ತಾ ಗಟ್ಟಿಯಾದರೆ ಈ ರೋಗದ ವೈರಾಣು ದೇಹ ಸೇರಿದರೂ ಸೋತು ಹೋಗುವುದು ಖಂಡಿತ. ಸಕಾರಾತ್ಮಕ ಚಿಂತನೆಗಳಿಗೆ ಯೋಗ ಅನಿವಾರ್ಯ ಎಂದು ಹೇಳಿದರು.
ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ಸಾಮಾನ್ಯವಾಗಿ ರೋಗರುಜಿನಗಳಿಂದ ಮುಕ್ತವಾಗಿರುವುದನ್ನು ಆರೋಗ್ಯವೆಂದು ಭಾವಿಸುತ್ತೇವೆ. ಆದರೆ, ಮಾನಸಿಕ ಆರೋಗ್ಯವೂ ಅತೀ ಪ್ರಮುಖವಾದುದು. ಯೋಗವು ದೇಹದೊಡನೆ ಕಾರ್ಯ ನಿರ್ವಹಿಸುವುದಲ್ಲದೆ, ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಬೌದ್ಧಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಈ ದೇಹವನ್ನು ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುತ್ತದೆ. ಜೀವನದ ಅಂತಿಮ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಲು ನೆರವಾಗುತ್ತದೆ. ಎಂದು ಹೇಳಿದರು.
ವೇದಿಕೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ಶರಾವತಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕಿ ಮಮತಾ ಸ್ವಾಗತಿಸಿ, ವಂದಿಸಿದರು.