ಸುಬ್ರಹ್ಮಣ್ಯ: ಬಸ್ ಕಂಡಕ್ಟರ್ ಓರ್ವರು ವಿಳಂಬವಾಗಿ ಟಿಕೆಟ್ ನೀಡಿದ ಪರಿಣಾಮ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದು ಕಂಡಕ್ಟರ್ ಅನುಚಿತ ವರ್ತನೆ ತೋರಿದ ಘಟನೆ ಪಂಜದಿಂದ ವರದಿಯಾಗಿದೆ.
ಪುತ್ತೂರು-ಕಾಣಿಯೂರು- ಸುಬ್ರಹ್ಮಣ್ಯ ಬಸ್ ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಬಾಳಿಲದ ಶೀನ ಎಂಬವರು ಸುಬ್ರಹ್ಮಣ್ಯಕ್ಕೆ ತೆರಳುವ ಸಲುವಾಗಿ ಪಂಜದಲ್ಲಿ ಮಂಬಾಗಿಲಿನಿಂದ ಬಸ್ ಏರಿದ್ದರು. ಬಸ್ ಹಿಂಬದಿ ಕುಳಿತ್ತಿದ್ದ ಕಂಡಕ್ಟರ್ ಹಲವು ಹೊತ್ತಾದರೂ ಬಾರದಿರುವುದನ್ನು ಗಮನಿಸಿ ಪ್ರಯಾಣಿಕ ಟಿಕೆಟ್ ನೀಡುವಂತೆ ಕರೆದು ತಿಳಿಸಿದ್ದರು.
ಇದರಿಂದ ಕುಪಿತಗೊಂಡ ಕಂಡಕ್ಟರ್ ಪ್ರಯಾಣಿಕನ ಜೊತೆ ವಾಗ್ವಾದ ಮಾಡಿದಲ್ಲದೆ, ಏರು ಧ್ವನಿಯಲ್ಲಿ “ನಿಮ್ಮಪ್ಪನಾ ಮನೆ ಆಳಾ” ಎಂದು ದಬಾಯಿಸಿ ಅನುಚಿತ ವರ್ತನೆ ತೋರಿರುವುದಾಗಿ ಆರೋಪಿಸಲಾಗಿದೆ.
ಘಟನೆಯಿಂದ ನೊಂದ ಪ್ರಯಾಣಿಕ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಈ ನಡುವೆ ಪ್ರಯಾಣಿಕನನ್ನು ಕರೆದು ಕಂಡಕ್ಟರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವುದಾಗಿ ತಿಳಿದು ಬಂದಿದೆ.