ಪುತ್ತೂರು: ಪತ್ರಿಕೋದ್ಯಮ ಎನ್ನುವುದು ಬಹಳ ವಿಶಾಲವಾದ ಕ್ಷೇತ್ರ. ಇಲ್ಲಿ ನಾವು ಕಲಿಯಬೇಕಾದ ವಿಷಯಗಳು ಹಲವಾರು ಇವೆ. ಮಾಧ್ಯಮ ಕ್ಷೇತ್ರದಲ್ಲಿ ಯಾವ ರೀತಿಯಾಗಿ ನಾವು ಮುಂದುವರೆಯಬೇಕು ಎಂದು ವಿದ್ಯಾರ್ಥಿ ಜೀವನದಲ್ಲಿಯೇ ನಿರ್ಧರಿಸಿ ಅದಕ್ಕೆ ಪೂರ್ವ ತಯಾರಿಯನ್ನು ಈ ಸಂದರ್ಭದಲ್ಲಿಯೇ ಮಾಡಿಕೊಳ್ಳಬೇಕು. ಇಲ್ಲಿ ಸತ್ಯಾಸತ್ಯತೆಗಳನ್ನು ಸರಿಯಾಗಿ ಪರಿಶೀಲಿಸಿ ಕಾರ್ಯನಿರ್ವಹಿಸುವುದು ಬಹುಮುಖ್ಯ. ಓರ್ವ ಸಮರ್ಥ ಪತ್ರಕರ್ತನಾಗಬೇಕಾದರೆ ಆತ ಒಳ್ಳೆಯ ಮಾತುಗಾರಿಕೆಯ ಕೌಶಲ್ಯವನ್ನು ಹೊಂದಿರಬೇಕು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ಮಂಗಳೂರಿನ ಟಿವಿ9 ವಾಹಿನಿಯ ವರದಿಗಾರ ಅಶೋಕ್ ಕುಮಾರ್ ಹೇಳಿದರು.
ಅವರು ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಡೆಸಿದ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ಒಂದು ಸವಾಲಿನ ಕೆಲಸ. ಅದನ್ನು ಪತ್ರಕರ್ತರು ಶ್ರದ್ಧೆಯಿಂದ ನಿರ್ವಹಿಸಬೇಕು. ವರದಿಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಪತ್ರಕರ್ತರು ಮಾಧ್ಯಮದ ನೀತಿ ಸಂಹಿತೆಗಳನ್ನು ತಿಳಿದುಕೊಂಡು ಕಾರ್‍ಯ ನಿರ್ವಹಿಸಿದರೆ ಉತ್ತಮ ಎಂದು ಹೇಳಿದರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಶ್ರೀ ಪಿ.ಕೆ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್ ನಿಡ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
























